ಮೈಸೂರು

ಗಣ್ಯ ವ್ಯಕ್ತಿಗಳ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಚೆನ್ನಪ್ಪ

ನಗರದ ಜನತೆ ಇಂಗ್ಲಿಷ್ ಭಾಷೆಗೆ ಸೀಮಿತರಾಗಿದ್ದಾರೆ. ಆದರೆ ಹಳ್ಳಿಯ ಜನರು ಕನ್ನಡ ಭಾಷೆಗೆ ಸೀಮಿತರಾಗಿದ್ದಾರೆ. ಹಳ್ಳಿಯ ಜನರಿಗೂ ಇಂಗ್ಲಿಷ್ ಭಾಷೆಯ ಪರಿಚಯ ಮಾಡಿಕೊಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಹೇಳಿದರು.

ಮೈಸೂರು ಮಾನಸ ಗಂಗೋತ್ರಿಯ  ತತ್ತ್ವಶಾಸ್ತ್ರ ಅಧ್ಯಯನ ವಿಭಾಗದ  ಸಭಾಂಗಣದಲ್ಲಿ ತತ್ವಶಾಸ್ತ್ರ ವತಿಯಿಂದ ಬುಧವಾರ ಏರ್ಪಡಿಸಲಾದ   ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಹೆಚ್.ಚೆನ್ನಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನಸಾಮಾನ್ಯರಿಗೂ ಇಂಗ್ಲಿಷ್ ಭಾಷೆ ಅರ್ಥ ಆಗಬೇಕು. ಇಂಗ್ಲಿಷ್ ಆಡಳಿತ ಭಾಷೆಯಾಗಿರುವುದರಿಂದ ಎಲ್ಲರೂ ಅದನ್ನು ಕಲಿತರೆ ಒಳ್ಳೆಯದು. ಹಾಗಂತ ಕನ್ನಡವನ್ನು ಕಡೆಗಣಿಸಿ ಎಂದರ್ಥವಲ್ಲ ಎಂದರಲ್ಲದೇ ಇಂದಿನ ದಿನದಲ್ಲಿ ಇಂಗ್ಲಿಷ್ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.

ಕನಕದಾಸರನ್ನು ಬಣ್ಣಿಸಿದ ಅವರು ಕನಕದಾಸರ ಸಾಮಾಜಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದ ಬೆಳವಣಿಗೆ ಸಾಧ್ಯ ಎಂದರು. ಹಿಂದಿನ  ಗಣ್ಯವ್ಯಕ್ತಿಗಳು ಸೂಜಿಯಿಂದ ಪೋಣಿಸಿದಂತೆ ರಾಜ್ಯವನ್ನು ಕಟ್ಟುವ ಕೆಲಸ ಮಾಡುತ್ತಿದ್ದರು. ಅವರ ತತ್ವಾದರ್ಶಗಳು  ನಮ್ಮ ಜೀವನದ ದಾರಿದೀಪ ಆಗಬೇಕು.  ಯಾರು ಹಿಂದುಳಿದ ವರ್ಗದ ಜನರ ಬೆಳೆವಣಿಗೆ  ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೋ  ಅವರು ವಿಶ್ವ ಮಾನವರಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಎಸ್.ವೆಂಕಟೇಶ್, ರಾಘವೇಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: