ದೇಶಪ್ರಮುಖ ಸುದ್ದಿ

ಹೊಸ ನೋಟುಗಳ ಕೊರತೆ: ಜನರ ಬವಣೆ ತಗ್ಗಿಸಲು 10 ಅಂಶಗಳ ಸೂತ್ರ ಪ್ರಕಟ

ಹಳೆ ನೋಟುಗಳ ಚಲಾವಣೆ ರದ್ದತಿ ವೇಳೆ ವಿಧಿಸಿರುವ ನೋಟು ವಿನಿಮಯ ನಿಯಮಗಳಿಂದಾಗಿ ಸಾರ್ವಜನಿಗೆ ಉಂಟಾಗಿರುವ ತೊಂದರೆ ನಿವಾರಿಸಲು ಕೇಂದ್ರ ಸರ್ಕಾರವು ನಿಗಾ ವಹಿಸಿದ್ದು, ಇದೀಗ ರಿಸರ್ವ್ ಬ್ಯಾಂಕ್ ಹತ್ತು ಅಂಶಗಳ ಸೂತ್ರ ಪ್ರಕಟಿಸಿದೆ.

ಪ್ರಮುಖವಾಗಿ ಡೆಬಿಟ್ ಕಾರ್ಡ್‍ ಬಳಸಿ ನಡೆಸುವ ಆನ್‍ಲೈನ್‍ ವ್ಯವಹಾರಗಳ ಮೇಲೆ ಸೇವಾ ತೆರಿಗೆ ವಿಧಿಸದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಮತ್ತು ಕೆಲವು ಖಾಸಗಿ ಬ್ಯಾಂಕುಗಳು ಸಹ ಸರ್ಕಾರದ ನಿರ್ದೇಶನವನ್ನು ಜಾರಿಗೆ ತರಲು ಒಪ್ಪಿಕೊಂಡಿರುವುದರಿಂದ ಆನ್‍ಲೈನ್‍ ಪಾವತಿ ಹೆಚ್ಚಾಗಿ ನೋಟುಗಳ ಕೊರತೆಗೆ ಸ್ವಲ್ಪಮಟ್ಟಿಗಿನ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದೇ ವೇಳೆ ಇ-ವ್ಯಾಲೆಟ್‍ನಲ್ಲಿ ಉಳಿಸಬಹುದಾದ ಹಣದ ಮಿತಿಯನ್ನು 20 ಸಾವಿರ ರುಪಾಯಿಗಳಿಗೆ ಏರಿಸಲಾಗಿದೆ. ರೈತರಿಗೆ ಉಂಟಾಗಿರುವ ಅನಾನುಕೂಲ ತಡೆಯಲು ಮತ್ತು ಆನ್‍ಲೈನ್‍ ಪಾವತಿಯನ್ನು ಸುಗಮಗೊಳಿಸಲು ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖ ಹತ್ತು ಅಂಶಗಳ ಪಕ್ಷಿನೋಟ ಇಂತಿದೆ.

  1. ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್‍ಗಳಿಗೆ ದೊರೆಯುವ ಹಣದ ಮಿತಿಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ – ನಬಾರ್ಡ್‍ 21 ಸಾವಿರ ರೂಗಳಿಗೆ ಏರಿಸಿದೆ. ಇದರಿಂದಾಗಿ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳಿಗೆ ಹಣ ಮಂಜೂರಾತಿಗೆ ಇರುವ ತಡೆ ನಿವಾರಣೆಯಾಗಲಿದ್ದು, ಕೃಷಿಕರಿಗೆ ಬೆಳೆ ಸಾಲ ತೆಗೆದುಕೊಳ್ಳುವುದು ಸುಲಭವಾಗಲಿದೆ. ಸದ್ಯದಲ್ಲೇ ರೈತರಿಗೆ ಉಂಟಾಗಿರುವ ಅನಾನುಕೂಲ ತಪ್ಪಲಿದೆ. ಇದರಿಂದ ರೈತ ಸಮುದಾಯದ ಶೇ. 40 ರಷ್ಟಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಮತ್ತು ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ.
  2. ಡಿಸಿಸಿ ಬ್ಯಾಂಕುಗಳಿಗೆ ಅಗತ್ಯವಿರುವ ನಗದು ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆರ್ಬಿಐ ಮತ್ತು ಇತರ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ಇದರಿಂದ ಕೃಷಿ ಸಾಲ ವಿತರಣೆಗೆ ನಗದು ಕೊರತೆ ಬೀಳದು.
  3. ಒಂದು ಕೋಟಿ ರೂಪಾಯಿವರೆಗೆ ಸಾಲ ಪಡೆದವರಿಗೆ ಮರುಪಾವತಿ ಅವಧಿಯನ್ನು 60 ದಿನಗಳವರೆಗೆ ಆರ್‍ಬಿಐ ವಿಸ್ತರಿಸಿದೆ. ಬ್ಯಾಂಕುಗಳು, ಡಿಸಿಸಿ ಬ್ಯಾಂಕುಗಳು ಇತರ ಸಹಕಾರಿ ಬ್ಯಾಂಕುಗಳಿಂದ ಪಡೆದ ವೈಯಕ್ತಿ ಸಾಲ, ಬೆಳೆ ಸಾಲ, ಹೌಸಿಂಗ್ ಸಾಲ, ಕೃಷಿ ಸಾಲಗಳಿಗೂ ಇದು ಅನ್ವಯಿಸುತ್ತದೆ.
  4. ಜನಧನ ಖಾತೆದಾರರೂ ಸೇರಿದಂತೆ ದೇಶದಲ್ಲಿ ಒಟ್ಟು 30 ಕೋಟಿ “ರು-ಪೇ” ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದ್ದು, ನೋಟು ರದ್ದತಿ ಮಾಡಿದ ನಂತರ ಕಳೆದ 12 ದಿನಗಳಲ್ಲಿ ಇವುಗಳ ಬಳಕೆ ಶೇಕಡಾ 300% ರಷ್ಟು ಹೆಚ್ಚಿದೆ. ಈ ಕಾರ್ಡುಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ನಿಟ್ಟಿನಲ್ಲಿ ಡಿಸೆಂಬರ್ 31ರ ವರೆಗೆ ಸೇವಾ ಶುಲ್ಕವನ್ನು ರದ್ದುಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ. ನ್ಯಾಷನಲ್ ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ (ಎನ್‍ಪಿಸಿಐ) ಈಗಾಗಲೇ ರು-ಪೇ ಕಾರ್ಡುಗಳ ಮೇಲಿನ ವಿನಿಮಯ ಶುಲ್ಕವನ್ನು ರದ್ದುಗೊಳಿಸಿದೆ. ಈ ಕ್ರಮಗಳಿಂದ ಡೆಬಿಟ್‍ ಕಾರ್ಡ್‍ ಸ್ವೀಕರಣೆ ಸಂಖ್ಯೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.
  5. ಇದರ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳು ಡೆಬಿಟ್‍ ಕಾರ್ಡ್‍ಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೇವಾ ಶುಲ್ಕವನ್ನು ಡಿಸೆಂಬರ್ 31 ರ ವರೆಗೆ ರದ್ದುಗೊಳಿಸಿವೆ.
  6. ಇ-ವ್ಯಾಲೆಟ್‍ ಮೂಲಕ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ವೈಯಕ್ತಿಕ ಇ-ಪಾವತಿ ಮಿತಿಯನ್ನು 10 ಸಾವಿರದಿಂದ 20 ಸಾವಿರದವರೆಗೆ ಹೆಚ್ಚಿಸಲಾಗಿದೆ.
  7. ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಲೆವಿ ಸೇವಾ ಶುಲ್ಕವನ್ನು ಡಿಸೆಂಬರ್ 31 ರ ವರೆಗೆ ವಿಧಿಸದಿರಲು ತೀರ್ಮಾನಿಸಿದೆ. ಈ ಮೊದಲು ದ್ವಿತೀಯ ದರ್ಜೆಗೆ 20 ರೂ. ಪ್ರಥಮ ದರ್ಜೆಗೆ 40 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಇದರಿಂದ ಪ್ರಯಾಣಿಕರು ಇ-ಟಿಕೆಟ್‍ ಖರೀದಿಸಲು ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಇದುವರೆಗೆ ರೈಲ್ವೆಯಲ್ಲಿ ಇ-ಟಿಕೆಟ್‍ ಖರೀದಿದಾರರ ಪ್ರಮಾಣ ಶೇಕಡಾ 58 ರಷ್ಟು ಮತ್ತು ಕೌಂಟರ್‍ ನಲ್ಲಿ ಟಿಕೆಟ್ ಖರೀದಿಸುವವರ ಪ್ರಮಾಣ ಶೇ. 42 ರಷ್ಟು ಇತ್ತು. ಇದೀಗ ಸೇವಾ ಶುಲ್ಕವನ್ನು ಕಡಿತಗೊಳಿಸಿರುವುದರಿಂದ ಇ-ಟಿಕೆಟ್ ಖರೀದಿದಾರರ ಸಂಖ್ಯೆ ಹೆಚ್ಚಬಹುದು, ಇದರ ಮೂಲಕ ನಗದು-ರಹಿತ ವ್ಯವಹಾರಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
  8. ಬ್ಯಾಂಕಿಂಗ್‍ ಸೇವೆಗಳನ್ನು ನೀಡುವ ಮೆಸೇಜ್‍ಗಳಿಗೆ ಶುಲ್ಕದಲ್ಲಿ ಕಡಿತಗೊಳಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ – ಟ್ರಾಯ್ ನಿರ್ಧರಿಸಿದೆ. ಇದರಿಂದ ಶೇ. 65 ರಷ್ಟು ಫೀಚರ್ ಫೋನ್ ಬಳಸುವ ಗ್ರಾಹಕರಿಗೆ ಸಂದೇಶ ತಲುಪಿಸಲು ಸಹಕಾರಿಯಾಗಲಿದೆ.
  9. ಚೆಕ್‍ಪೋಸ್ಟ್‍ ಮತ್ತು ಟೋಲ್‍ಪ್ಲಾಜಾಗಳಲ್ಲಿ ಕಾಯುವ ಸಮಯ ಉಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಮತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
  10. ಎಲ್ಲ ಸರ್ಕಾರಿ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ವ್ಯವಹಾದಲ್ಲಿ ಡಿಜಿಟಲ್ ಪೇಮೆಂಟ್ ವ್ಯಸ್ಥೆ ಅಳವಡಿಸುವಂತೆ ಸೂಚಿಸಲಾಗಿದೆ. ಏಕೀಕೃತ ಪಾವತಿ, ಆಧಾರ್ ಸಹಿತ ಪಾವತಿ, ಡೆಬಿಟ್ ಕಾರ್ಡ್‍ಗಳ ಮೂಲಕ ಪಾವತಿ ನಡೆಸಿದಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ಜಾರಿಗೆ ತರಬಹುದು. ಹೀಗಾದಲ್ಲಿ ಹಣದ ಹರಿವಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

Leave a Reply

comments

Related Articles

error: