ಕರ್ನಾಟಕ

ಹಲ್ಲೆಗೊಳಗಾದ ವಿದ್ವತ್ ನಮ್ಮ ಕಾರ್ಯಕರ್ತ ಅಂದು ನಂತರ ಅಲ್ಲವೆಂದ ಅಮಿತ್ ಶಾ!

ಮಂಗಳೂರು (ಫೆ.20): ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆಯಿಂದ ಮಾರಣಾಂತಿಕವಾಗಿ ಗಾಯಗೊಂಡಿರುವ ಮತ್ತು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‍ ಬಿಜೆಪಿ ಕಾರ್ಯಕರ್ತ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಕರ್ನಾಟಕದ ಕರಾವಳಿ ಜಿಲ್ಲೆಯಗಳ ಪ್ರವಾಸದಲ್ಲಿರುವ ಅಮಿತ್ ಷಾ, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಸಮೀಪದ ಕುಲ್ಕುಂದದಲ್ಲಿ ನವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹಲ್ಲೆ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಶಾಸಕರ ಪುತ್ರನೇ ಹಲ್ಲೆ ನಡೆಸಿದ್ದರೂ ಸಿಎಂ ಸಿದ್ದರಾಮಯ್ಯ ಸುಮ್ಮನಿರುವುದೇಕೆ? ಅಲ್ಪಸಂಖ್ಯಾತ ಎಂಬ ಕಾರಣಕ್ಕಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆಯೇ? ರಾಜ್ಯದ ಜನರಿಗೆ ರಕ್ಷಣೆ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದ ಅಮಿತ್‍ ಷಾ, ಇದೇ ವೇಳೆ ವಿದ್ವತ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ ಎಂದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಓಲೈಕೆ ರಾಜಕಾರಣ ಯಶಸ್ವಿಯಾಗುವುದಿಲ್ಲ. ಅವರ ಓಲೈಕೆ ಮತ್ತು ಧ್ರುವೀಕರಣ ರಾಜಕಾರಣವನ್ನು ಎನ್.ಎ.ಹ್ಯಾರಿಸ್ ಮಗನ ಪ್ರಕರಣದಲ್ಲಿ ಗಮನಿಸಬಹುದು. ಶಾಸಕರ ಮಗನೊಬ್ಬ ಓರ್ವನ ಮೇಲೆ ಹಲ್ಲೆ ಮಾಡಿದರೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲವೇಕೆ? ಎಂದು ಅವರು ಪ್ರಶ್ನಿಸಿದ್ದರು.

ನಮ್ಮ ಕಾರ್ಯಕರ್ತನಲ್ಲ! ನಂತರ ಈ ವಿಷಯದಲ್ಲಿ ಸ್ಪಷ್ಟನೆ ಪಡೆದುಕೊಂಡ ಅಮಿತ್‍ ಷಾ ಆತ ನಮ್ಮ ಕಾರ್ಯಕರ್ತನಲ್ಲ, ಆದರೂ ಶಾಸಕನ ಪುತ್ರನೆಂಬ ಕಾರಣಕ್ಕೆ ಎಫ್‍ಐಆರ್ ದಾಖಲಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಯು.ಟಿ.ಖಾದರ್, ಯಾವುದೇ ಪ್ರಕರಣದಲ್ಲಿ ಹಲ್ಲೆಗೀಡಾಗಲಿ ಅಥವಾ ಸಾನ್ನಪ್ಪಿದರೂ ಬಿಜೆಪಿಯವರು ನಮ್ಮ ಕಾರ್ಯಕರ್ತರೆನ್ನುತ್ತಾರೆ. ಈ ವಿಷಯದಲ್ಲಿ ಬಿಜೆಪಿಯ ಹೇಳಿಕೆ ಈಗಾಗಲೇ ಹಲವು ಬಾರಿ ವ್ಯಂಗ್ಯಕ್ಕೀಡಾಗಿದೆ ಎಂದು ಹೇಳಿದ್ದಾರೆ.

(ಎನ್‍ಬಿ)

Leave a Reply

comments

Related Articles

error: