
ಮೈಸೂರು
ತ್ಯಾಜ್ಯ ಘಟಕಕ್ಕೆ ಬೆಂಕಿ: ಒಂದೂವರೆ ಎಕರೆ ತ್ಯಾಜ್ಯ ಬೆಂಕಿಗಾಹುತಿ
ಮೈಸೂರಿನ ವಿದ್ಯಾರಣ್ಯಪುರಂ ಸೂಯೇಜ್ ಫಾರಂನಲ್ಲಿರುವ ಗೊಬ್ಬರ ತಯಾರಿಕಾ ಘಟಕದ ತ್ಯಾಜ್ಯ ಸಂಗ್ರಹಾಗಾರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಒಂದೂವರೆ ಎಕರೆ ಪ್ರದೇಶದ ತ್ಯಾಜ್ಯ ಬೆಂಕಿಗಾಹುತಿಯಾಗಿದೆ.
ಘಟಕದ ಕಸದ ರಾಶಿಗೆ ಬುಧವಾರ ಸಂಜೆ ಬೆಂಕಿ ಬಿದ್ದಿದೆ. ಸರಸ್ವತಿ ಪುರಂ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ಗಂಟೆಗಳ ಕಾಲ ಹರಸಾಹಸ ನಡೆಸಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ನಗರಪಾಲಿಕೆ ಮಹಾಪೌರ ಬಿ.ಎಲ್. ಭೈರಪ್ಪ, ಆಯುಕ್ತ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ನಾಗರಾಜ ಅರಸ್ ನೇತೃತ್ವದ ತಂಡದ ಸಹಾಯಕ ಅಗ್ನಿಶಾಮಕ ಅಧಿಕಾರಿ ಶಿವಸ್ವಾಮಿ, ಚಾಲಕ ನಂಜುಂಡಸ್ವಾಮಿ, ಪ್ರಭಾಕರ್, ಬಸವರಾಜು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.