ಕರ್ನಾಟಕಮೈಸೂರು

ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ರಾಜಕೀಯ ಹೆಚ್ಚುತ್ತಿದೆ: ಪಿ. ಮಲ್ಲೇಶ್ ಆಕ್ರೋಶ

ಪರಸ್ಪರ ವೈಯಕ್ತಿಕ ಪ್ರೀತಿ ಮತ್ತು ಗೌರವ ನೀಡುವುದನ್ನು ಕಲಿಸಬೇಕಾದ ವಿಶ್ವವಿದ್ಯಾನಿಲಯಗಳು ಇತ್ತೀಚೆಗೆ ಜಾತಿ ರಾಜಕೀಯದಲ್ಲಿಯೇ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿವೆ ಎಂದು ಹಿರಿಯ ಸಮಾಜವಾದಿ ಪಿ.ಮಲ್ಲೇಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಹಜರಂಗ-2016 ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ವಿಶ್ವವಿದ್ಯಾನಿಲಯದಲ್ಲಿ ಕಲಿಯುವಾಗ ಜಾತಿ ರಾಜಕೀಯ ಇರಲಿಲ್ಲ. ಯಾವ ಪ್ರಾಧ್ಯಾಪಕರೂ  ಜಾತಿಯನ್ನು ಕೇಳುತ್ತಿರಲಿಲ್ಲ. ಎಲ್ಲರಿಗೂ ಸಮಾನವಾದ ಶಿಕ್ಷಣವನ್ನು ನೀಡುತ್ತಿದ್ದರು. ಈಗ ಜಾತಿ ರಾಜಕೀಯ ಹೆಚ್ಚಾಗಿದ್ದು, ಪರಸ್ಪರ ಪ್ರೀತಿ, ಗೌರವಗಳಿಗೆ ನೆಲೆ ಇಲ್ಲದಂತಾಗಿದೆ. ರಾಜಕೀಯದಾಟಗಳೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ನದಿಗಳೆಲ್ಲ ಬತ್ತಿವೆ. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ರಾಜ್ಯದಲ್ಲಿ ನೀರೇ ಇಲ್ಲದಾಗ ನೆರೆಯ ರಾಜ್ಯಕ್ಕೆ ಹೇಗೆ ನೀರು ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮೊದಲೆಲ್ಲ ಯುವಜನತೆ 100 ದಿನಗಳಿಗಿಂತಲೂ ಅಧಿಕ ಸಮಯ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಒಂದು ದಿನ ಪ್ರತಿಭಟನೆ ಮಾಡಿ ನಂತರ ಸುಮ್ಮನಿರುತ್ತಾರೆ. ವೈಯುಕ್ತಿಕವಾಗಿ ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನೀರನ್ನು ಬಿಟ್ಟು ಎಲ್ಲರ ದೃಷ್ಟಿಯಲ್ಲಿ ನಾಯಕರಾಗಲು ಹೋಗಬೇಡಿ. ರಾಜ್ಯದಲ್ಲಿಯೇ ನೀರಿನ ಅಗತ್ಯತೆ ಬಹಳವಿದೆ ಎಂದರು.

ಸಾಮಾಜಿಕ ಚಿಂತಕ ಪ್ರೊ. ಮುಜಾಫರ್ ಅಸಾದಿ, ಗಾಂಧಿ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: