ಕರ್ನಾಟಕ

ಅಜಾತಶತ್ರು ಕೆ.ಎಸ್.ಪುಟ್ಟಣ್ಣಯ್ಯ ನವರ ಅಕಾಲಿಕ ನಿಧನ ದುಃಖ ತಂದಿದೆ : ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

ರಾಜ್ಯ(ಮಂಡ್ಯ)ಫೆ.21:- ಅಜಾತಶತ್ರು, ರೈತ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ಅಪಾರ ದುಃಖ ತಂದಿದೆ ಎಂದು ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಬೃಹತ್ ದನಗಳ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಶ್ರೀಮಹದೇಶ್ವರ ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ನಡೆದ ಜಾತ್ರಾ ಮಹೋತ್ಸವಗಳಿಗೆ ದಿ.ಪುಟ್ಟಣ್ಣಯ್ಯ ನವರು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಸುತ್ತಿದ್ದರು. ಇದರಿಂದಾಗಿ ಅವುಗಳು ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದ್ದವು. ಆದರೆ ಈ ಬಾರಿ ಹಿಂದಿನ ಕಳೆ ಕಂಡು ಬರುತ್ತಿಲ್ಲ. ದಿ. ಪುಟ್ಟಣ್ಣಯ್ಯ ನವರು ರೈತರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸುತ್ತಿದ್ದರು, ಕೊಡದಿದ್ದರೆ ಹೋರಾಟ ನಡೆಸುತ್ತಿದ್ದರು. ಅವರ ಹೆಸರು ದೇಶದ ಉದ್ದಗಲಕ್ಕೂ ಪಸರಿಸಿದ್ದು ಅವರ ಘನತೆಯನ್ನು ಎತ್ತಿಹಿಡಿದಿದೆ. ಇಂತಹ ಧೀಮಂತ ನಾಯಕ ನಮ್ಮಿಂದ ದೂರವಾಗಿರುವುದು ನಮ್ಮೆಲ್ಲರಿಗೂ ಬಹಳ ದುಃಖವನ್ನು ತಂದಿದೆ. ದಯಾಮಯಿಯಾದ ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬವರ್ಗದವರಿಗೆ ಪುಟ್ಟಣ್ಣಯ್ಯ ನಿಧನದಿಂದ ಉಂಟಾಗಿರುವ ದುಃಖವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭ ಸದಾಶಿವ ಸ್ವಾಮೀಜಿ, ಕಿರಿಯಗುರು ಸಿದ್ದೇಶ್ವರ ಸ್ವಾಮೀಜಿ,ರೈತ ಮುಖಂಡರಾದ ಕೆಂಪುಗೌಡ,ಹೆಚ್ ಕೃಷ್ಣಮೂರ್ತಿ,ಜಗದೀಶ್,ಶಿವಕುಮಾರ್ ಸೇರಿದಂತೆ ಇತರರು ಇದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: