ಮೈಸೂರು

ನೋಟು ರದ್ದು ಹಿನ್ನೆಲೆ, ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಆಗ್ರಹ: ಪ್ರತಿಭಟನೆ

ನೋಟು ರದ್ದಿನಿಂದ ದೇಶದಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಮೈಸೂರು ಗ್ರಾಮಾಂತರ ಹಾಗೂ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಗುರುವಾರದಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

500 ಮತ್ತು 1000 ರು. ನೋಟು ರದ್ದಾದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಾರ್ವಜನಿಕರ ಜೀವನ ಅಸ್ತವ್ಯಸ್ಥಗೊಂಡು ಬಡ ಮತ್ತು ಬಲ್ಲಿದರ ದಿನನಿತ್ಯದ ಕನಿಷ್ಠ ಸೌಲಭ್ಯಗಳು ದಕ್ಕದೆ ಒಂದು ದಿನದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೋಟಿನ ಗಲಾಟೆಯಿಂದ ಮಂಗಳವಾರ ದೇಶದ ವಿವಿಧ ಭಾಗಗಳಲ್ಲಿ ಒಟ್ಟು ಐದು ಮಂದಿ ಸಾವಿಗೀಡಾಗಿದ್ದಾರೆ. ಗುಜರಾತಿನ ರಾಜ್‍ಕೋಟ್‍ನಲ್ಲಿ ಮಗಳ ಮದುವೆಗೆ ಹಣ ಸಿಗದೆ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ನೋಟು ರದ್ದು ವಿಚಾರದಲ್ಲಿ ಮೋದಿ ಸರಕಾರವು ಯಾವುದೇ ಪೂರ್ವಪರ ಆಲೋಚನೆಗಳನ್ನು ಮತ್ತು ಸಿದ್ಧತೆ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಸಮಸ್ಯೆಯನ್ನುಂಟು ಮಾಡಿದೆ.  ಸಾರ್ವಜನಿಕರು ತೊಂದರೆಗೀಡಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಹಾಗಾಗಿ ರಾಷ್ಟ್ರಪತಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನದತ್ತ ಹಕ್ಕನ್ನು ಚಲಾಯಿಸಿ ದೇಶದ ಆಂತರಿಕ ರಕ್ಷಣೆಗೆ ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಮಾಜಿ ಸಂಸದ ಎಚ್. ವಿಶ್ವನಾಥ್, ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ರವಿಶಂಕರ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: