ಮೈಸೂರು

ಭಾರತ್ ಸಂಚಾರ್ ನಿಗಮದ ಸಂಚಾರ ರಥಕ್ಕೆ ಚಾಲನೆ

ಭಾರತ್ ಸಂಚಾರ್ ನಿಗಮ ನಿಯಮಿತದ ವತಿಯಿಂದ ನ.25ರಿಂದ ಡಿ.14ರವರೆಗೆ 1 ತಿಂಗಳ ಕಾಲ ಆಯೋಜಿಸಿರುವ ಸಂಚಾರ ರಥಕ್ಕೆ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಜಯರಾಂ ನಗರದ ಬಸ್ ನಿಲ್ದಾಣದ ಬಳಿಯಿರುವ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಿ, ಅವರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಬಿಎಸ್‌ಎನ್‌ಎಲ್ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿಂದೆ ಹೊಸ ಸಿಮ್ ಖರೀದಿಸಬೇಕಾದರೆ ಹತ್ತಾರು ದಾಖಲೆಗಳನ್ನು ನೀಡಬೇಕಿತ್ತು. ಇದರಿಂದ ದಾಖಲೆಗಳ ಉಪದ್ರವವಾಗುತ್ತಿತ್ತು. ಇದೆಲ್ಲವನ್ನೂ ತಡೆಗಟ್ಟುವ ದೃಷ್ಟಿಯಿಂದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಇಕೆವೈಸಿ ಬಯೋಮೆಟ್ರಿಕ್ ಯಂತ್ರಕ್ಕೆ ಚಾಲನೆ ನೀಡಲಾಗಿದೆ. ಇದರಲ್ಲಿ ಕೇವಲ ಹೆಬ್ಬೆರಳು ಗುರುತು ನೀಡಿದರೆ ಸಾಕು ಯಾವುದೇ ದಾಖಲೆಗಳನ್ನು ನೀಡದೆ ಹೊಸ ಸಿಮ್ ಖರೀದಿಸಬಹುದಾಗಿದ್ದು ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದು ಹೇಳಿದರು.

ಸಂಚಾರ ರಥ ಒಂದು ತಿಂಗಳ ಕಾಲ ಮೈಸೂರು ಚಾಮರಾಜನಗರ ಜಿಲ್ಲೆಗಳ ಎಲ್ಲ ತಾಲೂಕು ಕೇಂದ್ರಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಸೇವೆ ನೀಡಲಿದೆ. ಈ ರಥದಲ್ಲಿ ಬಿಎಸ್‌ಎನ್‌ಎಲ್‌ಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳು ಲಭ್ಯವಿದ್ದು ಮತ್ತಷ್ಟು ಡಿಜಿಟಲೈಸ್ ಮಾಡುವ ಉದ್ದೇಶದಿಂದ ಸಾಂಕೇತಿಕವಾಗಿ ರಥಕ್ಕೆ ಚಾಲನೆ ನೀಡಲಾಗಿದೆ. ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಾಹಕರಿಗೆ ಉಪಯುಕ್ತವಾಗುವ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು ಬಿಎಸ್‌ಎನ್‌ಎಲ್ ಸದಾ ಸಿದ್ಧವಿದ್ದು ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.

ಸಂಚಾರ ರಥ ಬಿಎಸ್‌ಎನ್‌ಎಲ್ ಕಚೇರಿಯಿಂದ ಆರಂಭವಾಗಿ ಜಗನ್ಮೋಹನ ಅರಮನೆ ರಸ್ತೆ ಮೂಲಕ ಸೀತಾವಿಲಾಸ ರಸ್ತೆ ತಲುಪಿ ನಾರಾಯಣಶಾಸ್ತ್ರಿ ರಸ್ತೆ ಮಾರ್ಗವಾಗಿ ಸಾಗಿ ಚಾಮರಾಜ ಜೋಡಿ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಸಂಚರಿಸಿತು.

ಕಾರ್ಯಕ್ರಮದಲ್ಲಿ ಉಪ ವ್ಯವಸ್ಥಾಪಕ ರಂಗಸ್ವಾಮಿ, ಸರ್ದಾರ್ ಅಹಮದ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.

bsnl-1

 

 

Leave a Reply

comments

Related Articles

error: