
ಕರ್ನಾಟಕಪ್ರಮುಖ ಸುದ್ದಿ
10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ
ಬೆಂಗಳೂರು,ಫೆ.23-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಭಾಗಿತ್ವದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ಆಯೋಜಿಸಿದ್ದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇರಾನ್ ನಟಿ ಫತೇಮೇ ಮೋಟಮೆಡ್ ಆರ್ಯ, ಫ್ರೆಂಚ್ ನಿರ್ಮಾಪಕ ಮಾರ್ಕ್ ಭಾಷೆಟ್, ಬಾಲಿವುಡ್ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅತಿಥಿಗಳಾಗಿ ಭಾಗವಹಿಸಿದ್ದರು.
ಕರೀನಾ ಕಪೂರ್ ಮಾತನಾಡಿ, ತಮ್ಮ ಅಜ್ಜ ರಾಜ್ ಕಪೂರ್ ಗೆ ಕನ್ನಡ ಸಿನಿಮಾ ಮತ್ತು ಮೈಸೂರು ನಗರದ ಮೇಲೆ ಅಪಾರವಾದ ಪ್ರೀತಿ ಇತ್ತು. ಕಪೂರ್ ಕುಟುಂಬಕ್ಕೆ ಬೆಂಗಳೂರು ನಗರ ಯಾವತ್ತಿಗೂ ವಿಶೇಷವೇ. ತಮ್ಮ ತಾತನ ಕೆಲಸದ ಮೇಲಿನ ಉತ್ಸಾಹ ಇಂದು ನನ್ನನ್ನು ಕೂಡ ಬೆಂಗಳೂರಿನ ಸಿನಿಮೋತ್ಸವಕ್ಕೆ ಕರೆದುಕೊಂಡು ಬಂದಿದೆ. ತಮಗೆ ಕನ್ನಡ ಭಾಷೆ ಬಾರದಿದ್ದರೂ ಕೂಡ ಇನ್ನು ಮುಂದೆ ಯಾವತ್ತಾದರೂ ಕನ್ನಡ ಭಾಷೆಯಲ್ಲಿ ಇಲ್ಲಿನ ಜನರನ್ನು ಮನರಂಜಿಸುವ ಆಶಾವಾದವಿದೆ ಎಂದರು.
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಕನ್ನಡ ಕಾದಂಬರಿ ಮೇಲೆ ಚಿತ್ರ ತಯಾರಿಸಿದವರಿಗೆ 25 ಲಕ್ಷ ರೂ. ವಿಶೇಷ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ, ಕಾದಂಬರಿ ಲೇಖಕರಿಗೆ 5 ಲಕ್ಷ ರೂ. ನೀಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ಸಿನಿಮಾಗಳ ಚಿತ್ರೀಕರಣ ಮಾಡಿದವರಿಗೆ ಸರ್ಕಾರ 5 ಕೋಟಿ ರೂ. ವರೆಗೆ ಧನಸಹಾಯ ನೀಡಲಿದೆ ಎಂದರು.
ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಫಿಲ್ಮ್ ಸಿಟಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಜ್ಯದ ಅಲ್ಲಲ್ಲಿ ಜಂತಾ ಥಿಯೇಟರ್ ಗಳನ್ನು ಸ್ಥಾಪಿಸಲಾಗುವುದು. ಸ್ಥಳೀಯ ಸಿನಿಮಾಗಳಿಗೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಷ್ಟೊಂದು ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರೋತ್ಸವದ ಮೊದಲ ಸಿನಿಮಾವಾಗಿ ಸಾಲ್ವಟೋರ್ ಫಿಕಾರಾ ಮತ್ತು ವೆಲೆಂಟಿನೋ ಪಿಕೋನ್ ನಿರ್ದೇಶನದ ಇಟಲಿಯ ‘ಇಟ್ಸ್ ದಿ ಲಾ’ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಉದ್ಘಾಟನ ಚಿತ್ರವಾಗಿ ಪ್ರದರ್ಶನ ಕಂಡಿತು. ಮಾರ್ಚ್ 1 ವರೆಗೂ ಬೆಂಗಳೂರಿನ ಒರೆಯನ್ ಮಾಲ್ ನಲ್ಲಿ ವಿಶ್ವದ ವಿವಿಧ ಭಾಷೆಯ ಸಿನಿಮಾಗಳು ಪ್ರದರ್ಶನವಾಗಲಿದೆ.
ಇನ್ನುಳಿದಂತೆ ಸಚಿವ ಆರ್ ರೋಷನ್ ಬೇಗ್, ಡಿ.ಎಚ್ ಶಂಕರಮೂರ್ತಿ, ಬಸವರಾಜ್ ಹೊರಟ್ಟಿ, ಸಂಪತ್ ರಾಜ್, ಬಿ.ಎಸ್ ಹರ್ಷಾ, ವಿದ್ಯಾಶಂಕರ್, ಪ್ರಿಯಾಂಕ್ ಖರ್ಗೆ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಉಮಾಶ್ರೀ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಜಯಮಾಲಾ, ಅಂಬರೀಷ್ ಆಗಮಿಸಿರಲಿಲ್ಲ. ಕಾರ್ಯಕ್ರಮದ ನಿರೂಪಕಿಯರಾದ ಸುಹಾಸಿನಿ ಮತ್ತು ಶೃತಿ ಹರಿಹರನ್ ಕೂಡ ಆಗಮಿಸಿರಲಿಲ್ಲ. ಇನ್ನುಳಿದಂತೆ ಚಿತ್ರರಂಗದ ಬಹುತೇಕ ಹಿರಿ-ಕಿರಿ ಕಲಾವಿದರ ದಂಡು ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. (ವರದಿ-ಎಂ.ಎನ್)