ಸುದ್ದಿ ಸಂಕ್ಷಿಪ್ತ

ಫೆ.25: ನೇಯ್ಗೆ ಚಟುವಟಿಕೆಗಳಿಗೆ ಚಾಲನೆ

ಮೈಸೂರು ಫೆ.23:- ನಂಜನಗೂಡು ತಾಲೂಕು, ಬದನವಾಳು ಗ್ರಾಮದ ಖಾದಿ ಕೇಂದ್ರವು ಸ್ವತಂತ್ರ ಪೂರ್ವದಿಂದ ಸಾವಿರಾರು ಗ್ರಾಮೀಣ ಕುಶಲಕರ್ಮಿಗಳಿಗೆ ಜೀವನೋಪಾಯವನ್ನು ಕಲ್ಪಿಸಿದೆ. ಈ ಕೇಂದ್ರದಲ್ಲಿ ಕೇವಲ ಖಾದಿ  ನೂಲುಗಾರಿಕೆ ಅಲ್ಲದೆ ಕೈಕಾಗದ, ಬೆಂಕಿ ಪೊಟ್ಟಣ, ಎಣ್ಣೆ, ನಾರಿನ ಉದ್ಯಮ, ರೇಷ್ಮೆ ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿದ್ದವು. ಈ ಕೇಂದ್ರಕ್ಕೆ ಮಹಾತ್ಮ ಗಾಂಧಿಯವರು 1927 ಮತ್ತು 1936 ಎರಡು ಬಾರಿ ಭೇಟಿ ನೀಡಿ ಕೇಂದ್ರದ ಚಟುವಟಿಕೆಯನ್ನು ನೋಡಿ ಸಂತೋಷಪಟ್ಟಿರುತ್ತಾರೆ.

ಹಲವು ಏಳು ಬೀಳುಗಳನ್ನು ಕಂಡ ಕೇಂದ್ರವನ್ನು 1988ರಲ್ಲಿ ಹೊಳೆನರಸೀಪುರ ಖಾದಿ ಸಂಸ್ಥೆಯವರು ವಹಿಸಿಕೊಂಡು ಬಹಳ ಯಶಸ್ವಿಯಾಗಿ ಖಾದಿ ನೂಲುಗಾರಿಕೆ ಮತ್ತು ಖಾದಿ ನೇಯ್ಗೆ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಸುಮಾರು 70 ಜನ ಗ್ರಾಮೀಣ ಬಡ ಮಹಿಳೆಯರು ಈ ಕೇಂದ್ರದ ಆಶ್ರಯ ಪಡೆದಿದ್ದು ಈ ಕೇಂದ್ರದ ಮೂಲಕ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.

ಗ್ರಾಮೋದ್ಯೋಗ ಆಯೋಗವು 94 ಲಕ್ಷ ಕೊಟ್ಟು ಈ ಕೇಂದ್ರದ ಪುನರ್ಜಿವನಕ್ಕೆ ನೆರವು ನೀಡಿದ್ದಾರೆ. ರಾಜ್ಯ ಖಾದಿ ಮಂಡಳಿಯವರೂ ಸಹ ಸಂಪೂರ್ಣ ನೆರವನ್ನು ನೀಡಿದ್ದಾರೆ. ಈ ಹಣದಲ್ಲಿ ನೂಲುಗಾರರ ಅನುಕೂಲಕ್ಕಾಗಿ  ಉತ್ತಮವಾದ ಹೊಸ ಮಾದರಿಯ 8 ಕದರಿನ, 50 ಚರಕಗಳನ್ನೂ ಹಾಗೂ ನೇಕಾರರ ಅನುಕೂಲಕ್ಕಾಗಿ 15 ಸುಧಾರಿತ ಮಗ್ಗಗಳನ್ನು ಖರೀದಿಸಲಾಗಿದೆ.  ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಖಾದಿ ಭವನವನ್ನು ಹವಾನಿಯಂತ್ರಿತಗೊಳಿಸಿ ಒಳಾಂಗಣವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಫೆಬ್ರವರಿ 25 ರಂದು ಮಧ್ಯಾಹ್ನ 3 ಗಂಟೆಗೆ ಬದನವಾಳು ನೂಲುವ ಮತ್ತು ನೇಯ್ಗೆ ಸಮಗ್ರ ಕೇಂದ್ರದಲ್ಲಿ ಖಾದಿ ಆಯೋಗದ ಅಧ್ಯಕ್ಷರಾದ ವಿನಯ್‍ಕುಮಾರ ಸಕ್ಸೆನಾಜೀ ಅವರು ಖರೀದಿಸಿರುವ ವಸ್ತುಗಳು ಹಾಗೂ ವಿನ್ಯಾಸಗೊಳಿಸಿರುವ ಭವನವನ್ನು ಉದ್ಘಾಟಿಸುವರು ಹಾಗೂ  ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ಅಧ್ಯಕ್ಷರಾದ ಹೆಚ್.ಎನ್. ರಾಮಕೃಷ್ಣಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.    (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: