ಮೈಸೂರು

ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಹಾಗೂ ನನ್ನ ನಡುವೆ ಯಾವುದೇ ರೀತಿಯ ಒಳ ಒಪ್ಪಂದ ನಡೆದಿಲ್ಲ : ಎಂ.ಅಶ್ವಿನ್‍ಕುಮಾರ್ ಸ್ಪಷ್ಟನೆ

ಮೈಸೂರು,ಫೆ.22:-  ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಹಾಗೂ ನನ್ನ ನಡುವೆ ಯಾವುದೇ ರೀತಿಯ ಒಳ ಒಪ್ಪಂದ ನಡೆದಿಲ್ಲ, ಈ ಕುರಿತು ಯಾವುದೇ ದೇವರ ಮುಂದೆ ಪ್ರಮಾಣ ಮಾಡಲು ನಾನು ಸಿದ್ಧ ಎಂದು ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‍ಕುಮಾರ್ ಸ್ಪಷ್ಟಪಡಿಸಿದರು.

ತಿ.ನರಸೀಪುರ ಪಟ್ಟಣದಲ್ಲಿ ಬಾಬು ಜಗಜೀವನರಾಂ ಸಮುದಾಯಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ಏಳಿಗೆಯನ್ನು ಸಹಿಸಲಾಗದ ಕಿಡಿಗೇಡಿಗಳು ನನ್ನ ಮೇಲೆ ಇಲ್ಲದ ಸಲ್ಲದ ಅಪ ಪ್ರಚಾರ ಮಾಡುವ ಸಲುವಾಗಿ ನಾನು ಮತ್ತು ಸುನೀಲ್ ಬೋಸ್ ಕೊಠಡಿಯೊಂದರಲ್ಲಿ ಕುಳಿತು ಮಾತನಾಡುವ ರೀತಿ ಪೋಟೋವೊಂದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಪೋಟೋ ಸಂಪೂರ್ಣ ನಕಲಿಯಾಗಿದೆ. ಹಾಗಾಗಿ ಈ ಕುರಿತು ನಾನು ಸೈಬರ್ ಕ್ರೈಂ ಪೋಲಿಸರಿಗೆ ದೂರು ನೀಡಲು ತೀರ್ಮಾನಿದ್ದೇನೆ ಎಂದರು. ಸುನೀಲ್ ಬೋಸ್ ಹಾಗೂ ನನ್ನ ನಡುವೆ ಯಾವುದೇ ಒಳ ಒಪ್ಪಂದ ನಡೆದಿಲ್ಲ. ಮುಂದೆ ಕೂಡ ನಾನು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗುವುದಿಲ್ಲ. ಹಾಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೇ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ನನ್ನ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.

ಜಿ.ಪಂ ಸದಸ್ಯನಾಗಿರುವ ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಎಲ್ಲ ವರ್ಗದ ಜನರ ವಿಶ್ವಾಸಗಳಿಸಿದ್ದು, ಇದನ್ನು ಮನಗಂಡಿರುವ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿರವರು ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಟಿಕೇಟ್ ನೀಡಿದ್ದಾರೆ. ಅವರ ನಂಬಿಕೆಗೆ ದ್ರೋಹವಾಗದಂತೆ ನಾನು ನಡೆದುಕೊಳ್ಳುತ್ತೇನೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಟಿಕೇಟ್ ವಂಚಿತ ಆಕಾಂಕ್ಷಿಗಳ ಸಹಕಾರ ಪಡೆದು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಬಾವುಟ ಹಾರಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕಪೋಲ ಕಲ್ಪಿತ ಪೋಟೋ ಕುರಿತಂತೆ ಎಚ್.ಡಿ.ಕುಮಾರಸ್ವಾಮಿ ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಟಿಕೇಟ್ ಪಡೆಯಲು ಪಕ್ಷ ಸೇರ್ಪಡೆಗೊಂಡಿದ್ದ ವ್ಯಕ್ತಿ ಪಕ್ಷದಲ್ಲಿ ಈ ರೀತಿಯ ಗೊಂದಲ ಸೃಷ್ಟಿಸಿದ್ದಾರೆಂದು ಸ್ಪಷ್ಟೀಕರಣ ನೀಡಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ ಮತದಾರರು ಯಾವುದೇ ಗೊಂದಲ ಮಾಡಿಕೊಳ್ಳದಂತೆ ಎಂ.ಅಶ್ವಿನ್‍ಕುಮಾರ್ ಮನವಿ ಮಾಡಿದರು.

ಈ ಸಂದರ್ಭ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ನಿರಂಜನ್‍ಕುಮಾರ್, ಬಿ.ಆರ್.ಮಂಜುನಾಥ್, ಕುಮಾರಸ್ವಾಮಿ, ಹೆಮ್ಮಿಗೆ ಸೋಮಣ್ಣ, ಮಾದೇಶ್, ರಾಮಸ್ವಾಮಿ, ಚಿಕ್ಕ ಜವರಪ್ಪ, ಹೊನ್ನನಾಯ್ಕ, ವೆಂಕಟೇಶ್, ರಾಮಸ್ವಾಮಿ, ಸಿದ್ದಪ್ಪ, ತಾ.ಪಂ ಸದಸ್ಯರಾದ ಸಾಜಿದ್ ಅಹಮ್ಮದ್, ಜವರಯ್ಯ, ವರದರಾಜು, ಅಬ್ದುಲ್ ಅತೀಕ್, ಮಾವಿನಹಳ್ಳಿ ರಾಜೇಶ್, ದೊಳ್ಳೇಗೌಡ, ದೀಪು ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: