ಮೈಸೂರು

ವಾಸ್ತು ಶಿಲ್ಪ ವೈಜ್ಞಾನಿಕ ತಳಹದಿಯುಳ್ಳ ವಿಷಯ : ಪ್ರೊ.ಎಂ.ಎಸ್.ಕೃಷ್ಣಮೂರ್ತಿ

ಮೈಸೂರು,ಫೆ.26:- ವಾಸ್ತು ಶಿಲ್ಪ ಕಾಗಕ್ಕ ಗುಬ್ಬಕನ ಕಥೆಯಾಗಿರದೇ  ವೈಜ್ಞಾನಿಕ ತಳಹದಿಯುಳ್ಳ ವಿಷಯವಾಗಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ತಿಳಿಸಿದರು.

ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ವತಿಯಿಂದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಸೋಮವಾರ ಆಯೋಜಿಸಲಾದ ಭಾರತೀಯ ದೇವಾಲಯಗಳ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಾಸ್ತು ಶಿಲ್ಪ ಕಬ್ಬಿಣದ ಕಡಲೆಯಲ್ಲ. ಅದು ಕಲ್ಲು ಸಕ್ಕರೆ. ಕಷ್ಟವಾದರೆ ಕಲ್ಲುಸಕ್ಕರೆ ಇಷ್ಟವಾದರೆ ಹಾಲು ಸಕ್ಕರೆ. ಇದು ಸೊಗಸಾಗಿ ಇರುವ ವಿಷಯ. ಭೌತ,ರಸಾಯನ ಎಲ್ಲರೂ ಇದನ್ನು ಓದುತ್ತಾರೆ. ಕಲೆಯನ್ನು ಅಧ್ಯಯನ ಮಾಡಿ ಪರಿಣಿತಿ ದೊರಕಿಸಿಕೊಂಡರೆ ವಿಶ್ವಮಾನ್ಯತೆ ದೊರಕಲಿದೆ. ಇದು ಕಷ್ಟವಲ್ಲದ್ದು, ಕಾಗಕ್ಕ ಗುಬ್ಬಕನ ಕಥೆಯಲ್ಲ. ಬಹಳ ಪ್ರೌಢವಾದ ಆಧಾರದ ಮೇಲೆ, ವೈಜ್ಞಾನಿಕ ತಳಹದಿಯನ್ನುಳ್ಳ ವಿಷಯ. ಅದಕ್ಕಾಗಿ ಇದನ್ನು ವಾಸ್ತು ವಿಜ್ಞಾನ ಅಂತಲೂ ಹೇಳಲಾಗುತ್ತದೆ. ಇದು ಪ್ರಾಚೀನ ಕಾಲದಿಂದಲೇ ಬಂದಿದ್ದು, ಕಷ್ಟವಿದೆ ಎನಿಸಿದರೂ ಸಾಕಷ್ಟು ಅನುವಾದ ಪುಸ್ತಕಗಳು ಬಂದಿವೆ. ಸಂಶೋಧನಾರ್ಥಿಗಳು ಇದನ್ನು ಓದಿ, ಅಧ್ಯಯನ ಮಾಡಿ. ಮತ್ತು ಸಂಸ್ಕೃತಿಯ ಮೂಲಕ್ಕೆ ಹೋಗಿ ನಿಮ್ಮ ಜ್ಞಾನವನ್ನು ಪ್ರಬುದ್ಧಗೊಳಿಸಿಕೊಳ್ಳಿ ಎಂದರು. ಕಷ್ಟವಾದರೂ ಸಹ ಇದನ್ನು ಅರ್ಥಮಾಡಿಕೊಳ್ಳಬೇಕು. ಹೊಸಹೊಸ ಸಂಶೋಧನೆಗಳನ್ನು ನಡೆಸಿ, ಹಾಗೆ ಮಾಡಿದಾಗ ಈ ಕಾರ್ಯಾಗಾರ ನಡೆಸಿದ್ದಕ್ಕೂ ಸಾರ್ಥಕತೆ ಸಿಗಲಿದೆ ಎಂದು ತಿಳಿಸಿದರು.

ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಪ್ರಭಾರ ನಿರ್ದೇಶಕ ಡಾ.ಗವಿಸಿದ್ದಯ್ಯನವರು ಮಾತನಾಡಿ ಕರ್ನಾಟಕ ಇತಿಹಾಸದಲ್ಲಿ ವಾಸ್ತುಶಿಲ್ಪ ಅಧ್ಯಯನ ಮಾಡಿದರೆ ಒಂದೊಂದು ದೇವಸ್ಥಾನದ ಮೇಲೂ ಒಂದೊಂದು ಪಿಹೆಚ್ ಡಿ ಮಾಡಬಹುದು. ನಾವು ಎಲ್ಲಿ ಎಡವುತ್ತಿದ್ದೇವೆ ಎಂದರೆ ಸ್ವತಂತ್ರವಾಗಿ ಏನನ್ನೂ ಮಾಡುತ್ತಿಲ್ಲ. ಆಗಲೇ ಸಿದ್ಧಗೊಂಡಿರುವಂಥಹ ಅಧ್ಯಯನ ಇಟ್ಟುಕೊಂಡು ನಮ್ಮ ಪಿಹೆಚ್ ಡಿ ಪಡೆಯುವತ್ತ ಕಾರ್ಯೋನ್ಮುಖರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ವಿವಿ ಮಾರ್ಗದರ್ಶಕರನ್ನು, ಶಿಷ್ಯವೇತನವನ್ನೂ ನೀಡಲಿದೆ. ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಕ್ಷೇತ್ರಕಾರ್ಯ ಮಾಡುವ ಮೂಲಕ ಉತ್ತಮ ಮೌಲ್ಯಯುತವಾದ ಪಿಹೆಚ್ ಡಿ ಪ್ರಬಂಧವನ್ನು ರೂಪಿಸುವ ಜವಾಬ್ದಾರಿ ಸಂಶೋಧಕರ ಮೇಲಿದೆ. ಪಿಹೆಚ್ ಡಿ ಎಂದರೆ ಹತ್ತು ಪುಸ್ತಕ ಇಟ್ಟು ಹನ್ನೊಂದನೆಯದನ್ನು ಮಾಡುವುದಲ್ಲ. ವಿದ್ಯಾರ್ಥಿಗಳ ಮೇಲೆ ಜವಾಬ್ದಾರಿಯಿದೆ.ನಾವೇ ಸ್ಥಳಕ್ಕೆ ಹೋಗಿ ಅನುಭವ ಪಡೆದು ಬರೆದಾಗ ಅದಕ್ಕೆ ಮೌಲ್ಯ ಜಾಸ್ತಿ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿವಿ ಡೀನ್ ಡಾ.ಮಹಾದೇವಿ, ಮೈಸೂರು ವಿವಿ ಕುಲಪತಿ ಪ್ರೊ.ಸಿ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್,ಎಸ್.ಎಚ್)

Leave a Reply

comments

Related Articles

error: