ಮೈಸೂರು

ಅಧಿಕಾರಿಗಳು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಿದರೆ ಹಿಂದುಳಿದ ವರ್ಗಗಳನ್ನು ಸರ್ಕಾರದ ಯೋಜನೆಗಳು ತಲುಪಲು ಸಾಧ್ಯ : ಪ್ರೊ.ಸಿ.ಬಸವರಾಜು

ಮೈಸೂರು,ಫೆ.26:- ಅಧಿಕಾರಿಗಳು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಿದರೆ ಹಿಂದುಳಿದ ವರ್ಗಗಳನ್ನು ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ತಲುಪಲು ಸಾಧ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ವಿವಿ ವತಿಯಿಂದ ಸೋಮವಾರ ಹಿಂದುಳಿದ ವರ್ಗಗಳ ಕೋಶ ಮತ್ತು ವೃತ್ತಿ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ಕಾರದ ಆದೇಶದನ್ವಯ ವಿವಿಯಲ್ಲಿ ಹಿಂದುಳಿದ ವರ್ಗಗಳ ಕೋಶವನ್ನು ಆರಂಭಿಸಿ ಉದ್ಘಾಟಿಸಲಾಗಿದೆ. ಈ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದು ವಿಶ್ವವಿದ್ಯಾನಿಲಯದ ಗುರಿಯಾಗಿದ್ದು, ಹಿಂದುಳಿದ ವರ್ಗಗಳಿಗೆ ಕೂಡ ವಿಶೇಷ ಘಟಕ ಅವಶ್ಯವೆಂದು  ರೂಪಿಸಲಾಗಿದ್ದು ಅದರ ಮೂಲಕ ವಿಚಾರಸಂಕಿರಣ, ವೃತ್ತಿಕೌಶಲ್ಯ, ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರ 5ಲಕ್ಷರೂ. ವಿವಿಗೆ ನೀಡಿದ್ದು, ಮಾರ್ಚ್ 31ರೊಳಗೆ ಹಲವು ಕಾರ್ಯಕ್ರಮ ನಡೆಸುವ ಮೂಲಕ ವಿನಿಯೋಗವಾಗಬೇಕು ಎಂದರು. ಸಂವಿಧಾನದ ವ್ಯವಸ್ಥೆಯೊಳಗಡೆ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಸಮಾನತೆ,ಸ್ವಾತಂತ್ರ್ಯ, ಭ್ರಾತೃತ್ವ ಹಾಗೇ ಮೀಸಲಾತಿ ಎಲ್ಲವೂ ಎಲ್ಲ ವರ್ಗದವರನ್ನೂ ತಲುಪಬೇಕು. ಪರಿಶಿಷ್ಟಜಾತಿ/ಪಂಗಡದ ವರ್ಗಕ್ಕೆ ಯಾವ ಪ್ರಮಾಣದಲ್ಲಿ ತಲುಪುತ್ತಿದೆಯೋ ಅದೇ ಪ್ರಮಾಣದಲ್ಲಿ ಹಿಂದುಳಿದ ವರ್ಗವನ್ನೂ ತಲುಪಬೇಕು. ಸಮಾನವಾಗಿ ಎಲ್ಲವೂ ಹಂಚಿಕೆಯಾಗಬೇಕು. ಸಮಾಜದ ಮಯಖ್ಯವಾಹಿನಿಗೆ ಬರಬೇಕು. ಸರ್ಕಾರ ಕಳಕಳಿಯಿಂದ ಹಿಂದುಳಿದ ವರ್ಗಗಳಿಗೆ ಸವಲತ್ತು ನೀಡಲು ಯೋಜನೆ ಹಾಕಿಕೊಂಡಿದೆ. ಅದನ್ನು ಅಧಿಕಾರಿಗಳು ಬದ್ಧತೆಯಿಂದ, ಪ್ರಾಮಾಣಿಕತೆಯಿಂದ ತಲುಪಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ ಸಂವಿಧಾನದಡಿ ನೀಡಲಾದ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಎಂದರೇನು? ಎಂಬುದನ್ನು ಅದರ ಒಳಹೊಕ್ಕು ನೋಡಬೇಕು. ಆರ್ಥಿಕವಾಗಿ ಹಿಂದುಳಿದಿರುವಿಕೆ ಎಂದರೆ ಇಷ್ಟೇ ಆದಾಯ ಎಂಬುದನ್ನು ಒಪ್ಪಿಲ್ಲ. ಯಾಕೆಂದರೆ ಅದಕ್ಕೆ ಕಾರಣ ಇಚ್ಛಾಶಕ್ತಿಯ ಕೊರತೆ. ಹಿಂದುಳಿದ ವರ್ಗಗಳನ್ನು ಜಾತಿಗೆ ಸಮನಾಗಿ ನೋಡುತ್ತಿದ್ದೇವೆ ಎಂದರು. ರಾಜಕೀಯವಾಗಿಯೂ ಹಿಂದುಳಿದಿದ್ದಾರೆ.ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಮೀಸಲಾತಿ. ಶಾಸಕಾಂಗಗಳಲ್ಲಿ ಮೀಡಲಾತಿ ನೋಡಿಲ್ಲ ಎಂದರು. ಅಕ್ಷರಸ್ಥರು, ಆರ್ಥಿಕವಾಗಿ ಮುಂದುವರಿದವರು ಮತದಾನದಲ್ಲಿ ಪಾಲ್ಗೊಳ್ಳುವುದು ಕಡಿಮೆ ಆಗುತ್ತಿದೆ. ಅವಕಾಶ ನೀಡಿದಾಗ ಸಮರ್ಥ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು. ಮತದಾನವನ್ನು ಹೆಚ್ಚಿಸಬೇಕು ಎಂದು ಚುನಾವಣಾ ಆಯೋಗ ಕೂಡ ಶ್ರಮಿಸುತ್ತಿದೆ.  ಯುವಜನತೆ ನಿರ್ಭೀತಿಯಿಂದ ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಿ.  ಆ ಮೂಲಕ ಸಮರ್ಥ ವ್ಯಕ್ತಿಯ ಆಯ್ಕೆ ನಡೆಯಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖಾ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮಶೇಖರ್, ಡಾ.ಸುಭಾಶ್ ಎಸ್.ಸಿದ್ದಣ್ಣನವರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: