ದೇಶಪ್ರಮುಖ ಸುದ್ದಿ

ಬಂತು ಎ.ಸಿ ಹೆಲ್ಮೆಟ್ : ಬಿಸಿಲ ತಾಪ ನೀಗಿಸಲು ಹೈದರಾಬಾದ್ ಟೆಕ್ಕಿಯ ಹೊಸ ಐಡಿಯಾ

ಹೈದರಾಬಾದ್ (ಫೆ.26): ಬಿಸಿಲಿನ ಝಳದಲ್ಲಿ ಹೆಲ್ಮೆಟ್ ಧರಿಸುವುದು ಎಷ್ಟು ಕಷ್ಟ ಎನ್ನುವುದು ಬೈಕ್ ಸವಾರರಿಗೇ ಗೊತ್ತು. ಇಂತಹ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೈದರಾಬಾದ್ ಸ್ಟಾರ್ಟ್‍ಅಪ್‍ ಕಂಪನಿಯೊಂದರ ಟೆಕ್ಕಿಗಳು ಇದೀಗ ಎ.ಸಿ ಹೆಲ್ಮೆಟ್ ಆವಿಷ್ಕರಿಸಿದ್ದಾರೆ.

ಸದ್ಯ ಆವಿಷ್ಕಾರ ಮಾಡಿರುವ ಈ ಎ.ಸಿ ಹೆಲ್ಮೆಟ್‍, ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಈ ಹೆಲ್ಮೆಟ್ ಉಪಯೋಗಕ್ಕೆ ಬರಲಿದೆ. ದ್ವಿಚಕ್ರ ವಾಹನ ಸವಾರರಿಗೂ ಹೊಂದುವಂತೆ ಎ.ಸಿ. ಹೆಲ್ಮೆಟ್ ಅಭಿವೃದ್ಧಿಪಡಿಸಲಾಗುವುದು ಎಂದು ಈ ಟೆಕ್ಕಿಗಳು ಹೇಳಿಕೊಂಡಿದ್ದಾರೆ.

“ಜಾರ್ಶ್” ಎಂಬ ಸ್ಟಾರ್ಟ್‍ಅಪ್‍ ಕಂಪನಿಯ ಟೆಕ್ಕಿಗಳು ಈ ಹೆಲ್ಮೆಟ್ ಅನ್ನು ಆವಿಷ್ಕರಿಸಿದ್ದು, ರೀಚಾರ್ಜ್ ಮಾಡುವಂಥ ಬ್ಯಾಟರಿಯನ್ನು ಇದು ಒಳಗೊಂಡಿದೆ. ಈ ಬ್ಯಾಟರಿ ಬಳಸಿ 2 ರಿಂದ 8 ಗಂಟೆ ಹೆಲ್ಮೆಟ್ ಬಳಸಬಹುದಿದ್ದು, ತಂಪಿನ ಹಿತಾನುಭವವನ್ನು ಹೆಲ್ಮೆಟ್ ಮೂಲಕ ಬಳಕೆದಾರರು ಪಡೆಯಬಹುದಾಗಿದೆ.

ಚಾರ್ಜರ್ ಅನ್ನು ಮೊಬೈಲ್ ಫೋನ್ ರೀತಿಯೇ ಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ಧರಿಸಬಹುದಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಈ ಹೆಲ್ಮೆಟ್ ಹಗುರವಾಗಿದ್ದು, ಕೂದಲು ಉದುರುವುದೂ ಸೇರಿದಂತೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಲಾರದು ಎಂದು ಕಂಪನಿ ಹೇಳಿಕೊಂಡಿದೆ.

ಹೆಲ್ಮೆಟ್‍ನ ದರ 5 ಸಾವಿರ ರೂ ಇರಲಿದೆ ಎನ್ನಲಾಗಿದ್ದು, ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಮತ್ತು ಆನಂದ್ ಕುಮಾರ್ ಎನ್ನುವ ಮೂವರು ಮೆಕಾನಿಕಲ್ ಎಂಜಿನಿಯರ್ಗಳು ಈ ಹೆಲ್ಮೆಟ್ ಸಂಶೋಧಿಸಿದ್ದಾರೆ.

“ಈ ಹೆಲ್ಮೆಟ್‍ಗಳನ್ನು ನೌಕಾಪಡೆಯ ಕಮಾಂಡೊಗಳಿಗೆ ಮತ್ತು ಕೆಲವು ಕಂಪನಿಗಳಿಗೆ ನೀಡಲಾಗಿತ್ತು. ಟ್ರಾಫಿಕ್ ಪೊಲೀಸರಿಗೂ ವಿತರಿಸಲಾಗಿತ್ತು. ಬಳಕೆದಾರರ ಅಭಿಪ್ರಾಯ ಆಧರಿಸಿ, ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿದ್ದೇವೆ. ವಿನ್ಯಾಸದಲ್ಲೂ ಬದಲಾವಣೆ ಮಾಡಿದ್ದೇವೆ. ಈಗಾಗಲೇ ಮೂರು ಸಾವಿರ ಹೆಲ್ಮೆಟ್‍ಗಳನ್ನು ಉತ್ಪಾದಿಸಲಾಗಿದೆ” ಎಂದು ಕಂಪನಿ ಸಿಇಒ ಕೌಸ್ತುಬ್ ಕೌಂಡಿನ್ಯ ಹೇಳಿದ್ದಾರೆ.

(ಎನ್‍.ಬಿ)

Leave a Reply

comments

Related Articles

error: