ಮೈಸೂರು

ಅನ್ನಭಾಗ್ಯ ಯೋಜನೆಯನ್ನು ಕೇಂದ್ರ ಸರ್ಕಾರದ ಯೋಜನೆ ಎಂದು ಬಿಂಬಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ : ಯು.ಟಿ.ಖಾದರ್

ಮೈಸೂರು,ಫೆ.26:- ಬಿಜೆಪಿ ನಾಯಕರು ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ಟೀಕಿಸುತ್ತಿದ್ದರು ಆದರೆ ಈಗ ಅನ್ನಭಾಗ್ಯ ಯೋಜನೆಯ ಜನಪ್ರಿಯತೆಯನ್ನು ಕಂಡು ಈ ಯೋಜನೆಯು ಕೇಂದ್ರ ಸರ್ಕಾರದ ಯೋಜನೆ ಎಂದು ಬಿಂಬಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಟೀಕಿಸಿದರು.

ಅವರು ಪಿರಿಯಾಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಈ ಜನಪ್ರಿಯ ಯೋಜನೆಯನ್ನು ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶ, ಛತ್ತೀಸ್‍ಗಡ, ಮಹರಾಷ್ಟ್ರ, ಬಿಹಾರ್, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏಕೆ ಅನುಷ್ಠಾನ ಮಾಡಲಾಗಿಲ್ಲ ಎಂದು ಪ್ರಶ್ನಿಸಿದರು. ಈ ಹಿಂದೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಿದ್ದ ಹಲವು ದಾಖಲೆಗಳಿಗೆ ಬದಲಾಗಿ ಕೇವಲ ಆಧಾರ್ ಕಾರ್ಡ್ ನೀಡಿದಲ್ಲಿ ಪಡಿತರ ಚೀಟಿ ನೀಡಲಾಗುತ್ತಿದೆ ಎಂದರು. ಅರ್ಜಿದಾರರು ರೂ.50 ಪಾವತಿಸಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿದಾರರ ಮನೆ ಬಾಗಿಲಿಗೆ ಅಂಚೆಯ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಅರ್ಜಿದಾರರು ರೂ.75 ಹಣ ಪಾವತಿಸಿ ಕಾರ್ಡ್ ಪಡೆಯಬಹುದಾಗಿದೆ ಎಂದರು. ಈಗಾಗಲೇ 13 ಲಕ್ಷ ಪಡಿತರ ಕಾರ್ಡ್‍ಗಳನ್ನು ಅಂಚೆಯ ಮೂಲಕ ತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೈಸೂರು ಜಿಲ್ಲೆಯಲ್ಲಿ ಈವರೆಗೆ 12944 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 7642 ಪಡಿತರ ಕಾರ್ಡ್‍ಗಳನ್ನು ಅಂಚೆಯ ಮೂಲಕ ವಿತರಿಸಲಾಗಿದೆ ಎಂದರು.

ಬಿಪಿಎಲ್ ಮತ್ತು ಎಪಿಎಲ್ ಪಡಿತರ ಕಾರ್ಡ್‍ಗಳ ಬದಲಿಗೆ ಅಧ್ಯತೆ ಕುಟುಂಬ ಮತ್ತು ಆದ್ಯತೆ ರಹಿತ ಕುಟುಂಬ ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದರು. ರೂ.120,000 ಆದಾಯ ಹೊಂದಿರುವವರು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಸ್ಥಳದಲ್ಲೇ ಕಾರ್ಡ್ ಪಡೆಯಬಹುದಾಗಿದೆ ಎಂದರು. ಅಕ್ರಮ ಪಡಿತರ ಕಾರ್ಡ್ ಹೊಂದಿರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಮಾಹಿತಿದಾರರಿಗೆ ರೂ.400 ಬಹುಮಾನ ನೀಡಲಾಗುವುದು ಎಂದರು.

ರಾಜ್ಯದಲ್ಲಿರುವ ಒಟ್ಟು 20435 ಪಡಿತರ ಅಂಗಡಿಗಳಲ್ಲಿ 18200 ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದ್ದು ಇದರಿಂದ ಶೇ.95 ರಷ್ಟು ಸೋರಿಕೆ ತಡೆಯಲಾಗಿದೆ ಎಂದರು. ದೇಶದ ಪ್ರತಿಯೊಬ್ಬ ನಾಗರೀಕನಿಗೂ 5 ಕೆ.ಜಿ.ಅಕ್ಕಿ ಮತ್ತು 2 ಗೋಧಿಯನ್ನು ರಿಯಾಯಿತಿ ದರದಲ್ಲಿ ವಿತರಿಸುವ ಉದ್ದೇಶದಿಂದ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದರು. ಯಾವುದೇ ಸಂಘಸಂಸ್ಥೆಗಳು ಉಚಿತವಾಗಿ ವಸತಿ ಮತ್ತು ಊಟವನ್ನು ನೀಡುತ್ತಿದ್ದಲ್ಲಿ ದಾಸೋಹ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ಮತ್ತು 5 ಗೋಧಿಯನ್ನು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಹಿರಿಯ ಉಪ ನಿರ್ದೇಶಕ ಡಾ. ಕಾ.ರಾಮೇಶ್ವರಪ್ಪ, ತಹಶೀಲ್ದಾರ್ ಜೆ.ಮಹೇಶ್, ಆಹಾರ ನಿರೀಕ್ಷಕ ಸಣ್ಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: