ಮೈಸೂರು

ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮಾಡಿದ ಮತದಾನದ ಮಾರಾಟ,ಮತ ಕೊಂಡುಕೊಳ್ಳುವ ವ್ಯವಸ್ಥೆಯಾಗುತ್ತಿರುವುದು ವಿಷಾದನೀಯ : ಪ್ರೊ.ಸಿ.ಬಸವರಾಜು

ಮೈಸೂರು,ಫೆ.27:-ಭಾರತೀಯ ಸಾಮಾಜಿಕ ವ್ಯವಸ್ಥೆಯಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮಾಡಿದ ಮತದಾನದ ಹಕ್ಕು ಇದೀಗ ಮತದಾನದ ಮಾರಾಟ ಮತ್ತು ಮತ ಕೊಂಡುಕೊಳ್ಳುವ ವ್ಯವಸ್ಥೆಯಾಗುತ್ತಿರುವುದು ವಿಷಾದನೀಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಸಿ.ಬಸವರಾಜು ಖೇದ ವ್ಯಕ್ತಪಡಿಸಿದರು.

ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ರಣ ಕೇಂದ್ರದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಎಲ್ಲರಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ಚಿಂತನೆ-ವರ್ತಮಾನದ  ವ್ಯಾಖ್ಯಾನ ಕುರಿತ ಎರಡುದಿನಗಳ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಯಾವ ಚಿಂತನೆಯ ಆಧಾರದ ಮೇಲೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಹುಟ್ಟುಹಾಕಿದರೋ ಆ ಪ್ರಜಾಪ್ರಭುತ್ವ ಯಶಸ್ವಿಯಾಗಿ ಸಾಗಬೇಕಾದರೆ ಏನು ತಳಹದಿಯನ್ನು ಹಾಕಿಕೊಟ್ಟರೋ ಅದರ ಕುರಿತು ಕೆಲವೇ ವಿಷಯಗಳ ಕುರಿತು ಚರ್ಚೆ ನಡೆಯಬೇಕಿದೆ. ಸದ್ಯದಲ್ಲೇ ಚುನಾವಣೆ ಬರಲಿದ್ದು, ಚುನಾವಣೆ ಪ್ರಕ್ರಿಯೆ ಮುಗಿದ ನಂತರವೂ ಅಂಬೇಡ್ಕರ್ ತತ್ವಾದರ್ಶಗಳು ಎಷ್ಟು ಪ್ರಸ್ತುತ ಎಂಬುದು ಚರ್ಚೆಯಾಗಬೇಕು. ಸಂವಿಧಾನ ದೇಶದ ಕಾನೂನು. ಅದರಲ್ಲಿ ರಾಜ್ಯಕ್ಕೆ ಕೆಲವು ನಿರ್ದೇಶನಗಳನ್ನು ನೀಡಲಾಗಿದೆ. ರಾಜ್ಯ ಹೇಗಿರಬೇಕು?ಆಡಳಿತ ಹೇಗಿರಬೇಕು?ಆಡಳಿತ ವ್ಯವಸ್ಥೆಯೊಳಗೆ ಕೆಲಸ ಮಾಡತಕ್ಕ ವ್ಯವಸ್ಥೆ ಹೇಗಿರಬೇಕು?ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ಹೇಗೆ ಎದುರಿಸಬೇಕು. ಚುನಾವಣೆ ಬಂದಂತಹ ಸಂದರ್ಭದಲ್ಲಿ ಮತದಾರರ ಪಾತ್ರವೇನು? ಅವರ ಮೂಲಭೂತ ಹಕ್ಕೇನು? ಎನ್ನುವ ಎಲ್ಲ  ವಿಷಯಗಳನ್ನು ಸಂವಿಧಾನದ ಮೂಲಕ ನೀಡಲಾಗಿದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮಾಡಿದ ಪ್ರಮುಖ ವಿಷಯ. ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ನೀಡಲಾಗಿದೆ. ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯದ ಪರವಾಗಿ ಮಾತನಾಡಿಲ್ಲ. ಎಲ್ಲ ಸಮುದಾಯವನ್ನೂ ಗಮನದಲ್ಲಿಟ್ಟುಕೊಂಡು ಸಮಾನತೆಯ ಪರಿಕಲ್ಪನೆಯನ್ನು ಹುಟ್ಟು ಹಾಕಬೇಕು ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು ಎಂಬುದೇ ಉದ್ದೇಶ. ಆದರೆ ಸ್ವಂತ ಅಭಿವೃದ್ಧಿಗೋಸ್ಕರ, ಸರಿಯಾದ ಆಲೋಚನೆಯಿಲ್ಲದೇ,ಸಂವಿಧಾನದಲ್ಲಿರತಕ್ಕ ಮೂಲ ಆಶಯಗಳನ್ನೇ ತಿರುಚತಕ್ಕ ಶಕ್ತಿಗಳು ಬೆಳೆಯುತ್ತಿವೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಹಣದ ಮುಂದೆ ಚುನಾವಣೆ ನಡೆಯುತ್ತಿದೆ. ಅನೇಕ ಆಮಿಷಗಳಿಗೆ ಒಳಗಾಗುತ್ತಿದ್ದಾರೆ. ಅಂಬೇಡ್ಕರ್ ಅವರು ಯಾವ ದೃಷ್ಟಿಕೋನದಿಂದ ಪ್ರತಿಪ್ರಜೆಗೂ ಮತದಾನದ ಹಕ್ಕು ನೀಡಿದರೋ ಅದರ ಸದುಪಯೋಗವಾಗುತ್ತಿಲ್ಲ. ಮತದಾನದ ಮಾರಾಟ, ಮತಕೊಂಡುಕೊಳ್ಳುವ ವ್ಯವಸ್ಥೆ ಬರುತ್ತಿರುವುದು ವಿಷಾದನೀಯ. ಪ್ರಜಾಪ್ರಭುತ್ವ ಸಂಸ್ಥೆ ಎಂದು ನಂಬಿಕೊಂಡ ಸ್ಥಳದಲ್ಲಿ ಕ್ರಿಮಿನಲ್ ಗಳು ಪ್ರವೇಶಿಸುತ್ತಿದ್ದಾರೆ. ಯಾರು ಅರ್ಹರೋ ಅವರಿಗೆ ಮತನೀಡಬೇಕಾಗಿದೆ ಎಂದು ತಿಳಿಸಿದರು.

ಕುಲಸಚಿವೆ ಡಿ. ಭಾರತಿ ಮಾತನಾಡಿ ಅಂಬೇಡ್ಕರ್  ಆಶಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಭಾರತೀಯ ಪರಂಪರೆಯಲ್ಲಿ ಮನುಕುಲದ ಸುಧಾರಕರು, ಧಾರ್ಮಿಕ ಸುಧಾರಕರು ಹೀಗೆ ಎಷ್ಟೋ ಸುಧಾರಕರು ಬಂದಿದ್ದಾರೆ. ಆದರೆ ಇಲ್ಲಿ ಬೇರೂರಿದ ಅನಿಷ್ಟ ಪದ್ಧತಿ ಮಾತ್ರ ಸುಧಾರಣೆಯಾಗದಿರುವುದು ವಿಪರ್ಯಾಸ. ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿದೆ. ಅದು ಒಳ್ಳೆಯ ಬೆಳವಣಿಗೆಯಲ್ಲ.ಗಾಂಧಿ ಹುಟ್ಟಿದ ನಾಡು ಎಂದಂತೆ ಅಂಬೇಡ್ಕರ್ ಹುಟ್ಟಿದ ನಾಡು ಎಂಬ ಸಂದೇಶ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್, ಅಕಾಡೆಮಿ ಸದಸ್ಯ ಪ್ರೊ.ಸಿ.ನಾಗಣ್ಣ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಸಿದ್ರಾಮ್ ಸಿಂಧೆ ಮತ್ತಿತರರು ಉಪಸ್ಥಿತರಿದ್ದರು. 100ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: