ದೇಶಪ್ರಮುಖ ಸುದ್ದಿ

ಮತ್ತೆ ‘ಒಂದು ದೇಶ ಒಂದು ಚುನಾವಣೆ’ ಎಂದ ಬಿಜೆಪಿ: ಲೋಕಸಭೆಯ ಜೊತೆ ವಿಧಾನಸಭೆಗಳಿಗೂ ಚುನಾವಣೆ?

ನವದೆಹಲಿ (ಮಾ.1): ಬಿಜೆಪಿ ಮತ್ತೆ “ಒಂದು ದೇಶ, ಒಂದು ಚುನಾವಣೆ” ಮಂತ್ರ ಜಪಿಸಿದೆ. ನಿನ್ನೆ (ಫೆ.28) ದೆಹಲಿಯಲ್ಲಿ ನಡೆದ ಬಿಜೆಪಿಯ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸಲಾಗಿದ್ದು, ಪಕ್ಷವು ಈ ಹೊಸ ಪರಿಕಲ್ಪನೆಯನ್ನು ಜಾರಿಗೆ ತರಲು ಬಯಸುತ್ತದೆ ಎಂದು ಹೇಳಲಾಗಿದೆ.

ದೇಶದಲ್ಲಿ ಒಂದೊಂದು ರಾಜ್ಯದಲ್ಲೂ ಒಂದೊಂದು ಬಾರಿ ಚುನಾವಣೆ ನಡೆಯುತ್ತದೆ. ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಲೇ ಇರುವುದರಿಂದ ಯಾವಾಗಲೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಂತಾಗಿದೆ. ಇದರಿಂದ ಪ್ರಗತಿ ಸಾಧ್ಯವಾಗುತ್ತಿಲ್ಲ. ಅಭಿವರದ್ಧಿಪರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ವಿಧಾನಸಭೆ ಚುನಾವಣೆಗಳ ಜೊತೆಯಲ್ಲೇ ಲೋಕಸಭೆ ಚುನಾವಣೆಯನ್ನೂ ನಡೆಸುವುದರಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಹೆಚ್ಚು ಸಹಕಾರ, ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಸಭೆ ಅಭಿಪ್ರಾಯಪಟ್ಟಿತು ಎಂದು ವರದಿಯಾಗಿದೆ.

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಿತ್ತ ಸಚಿವ ಅರುಣ್ ಜೇಟ್ಲಿ, ಗೃಹಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮುಂತಾದ ಮುಖಂಡರು ಭಾಗವಹಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. (ಎನ್‍ಬಿ)

Leave a Reply

comments

Related Articles

error: