ಕರ್ನಾಟಕಮೈಸೂರು

ಅನಧಿಕೃತವಾಗಿ ಹಣ ಬದಲಾವಣೆ : ಬ್ಯಾಂಕ್ ಕ್ಯಾಷಿಯರ್ ಅಮಾನತು

500 ಹಾಗೂ 1000ರೂ.ಮುಖಬೆಲೆಯ ಹಳೆಯ ನೋಟುಗಳ ಬದಲಾವಣೆಗೆ ಕೇಂದ್ರ ಸರ್ಕಾರ ನವೆಂಬರ್ 24ನ್ನು ಕೊನೆಯ ದಿನವನ್ನಾಗಿಸಿತ್ತು. ಅದರಿಂದ ಕೊಳ್ಳೇಗಾಲದ ಬ್ಯಾಂಕೊಂದರ ಕ್ಯಾಷಿಯರ್ ಅನಧಿಕೃತವಾಗಿ ಚಿನ್ನದ ವ್ಯಾಪಾರಿಯೋರ್ವರಿಗೆ ಹಣವನ್ನು ಬುಧವಾರ ರಾತ್ರಿಯೇ  ಬದಲಾಯಿಸಿಕೊಟ್ಟ  ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕ್ಯಾಷಿಯರ್ ರನ್ನು ಅಮಾನತುಗೊಳಿಸಲಾಗಿದೆ.

ಚಾಮರಾಜನಗರದ ಕೊಳ್ಳೇಗಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಹೆಡ್ ಕ್ಯಾಷಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪರಶಿವಮೂರ್ತಿ ಎಂಬವರೇ ಹಣವನ್ನು ಬದಲಾಯಿಸಿಕೊಟ್ಟವರಾಗಿದ್ದು, ವೇಣುಗೋಪಾಲ್ ಹಳೆಯ ನೋಟುಗಳನ್ನು ನೀಡಿದವರಾಗಿದ್ದಾರೆ. ಕ್ಯಾಷಿಯರ್ ರನ್ನು  ಬ್ಯಾಂಕ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶ್ರೀಸಾಮಾನ್ಯರು ತಮ್ಮ ದಾಖಲೆ ಪತ್ರಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರೆ ಚಿನ್ನದ ವ್ಯಾಪಾರಿಗೆ ಬ್ಯಾಂಕಿನೊಳಗೆ ಕಮಿಷನ್ ಆಧಾರದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಬದಲಾಯಿಸಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟೊಂದು ಹಣವನ್ನು ಕ್ಯಾಷಿಯರ್ ಒಬ್ಬರಿಂದಲೇ ಬದಲಾಯಿಸಿಕೊಡಲು ಸಾಧ್ಯವೇ ಅಥವಾ ಇದರಲ್ಲಿ ಎಷ್ಟು ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

ವೇಣುಗೋಪಾಲ್ ಬಳಿ ಹಳೆಯ ನೋಟುಗಳನ್ನು ಪಡೆದ ಕ್ಯಾಷಿಯರ್ ಒಂದು ಕೋಟಿಗೆ 30ಲಕ್ಷರೂ.ಕಮಿಷನ್ ಪಡೆದಿದ್ದಾರೆ ಎನ್ನಲಾಗಿದೆ. ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿ ಬಯಲಾಗಿರುವುದರಿಂದ ಕ್ಯಾಷಿಯರ್ ಪರಶಿವಮೂರ್ತಿಯನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನಾಧರಿಸಿ ತನಿಖೆ ಮುಂದುವರಿದಿದೆ.

 

Leave a Reply

comments

Related Articles

error: