ಕರ್ನಾಟಕಪ್ರಮುಖ ಸುದ್ದಿ

ಸಾಮಾಜಿಕ ಸಂಶೋಧನೆಗಳ ಮುಖೇನ ಸಮಾಜ ತಿದ್ದಲು ಸಾಧ್ಯ: ಸಮಾಜಶಾಸ್ತ್ರಜ್ಞರ ಸಂಘದ ಅಧ್ಯಕ್ಷೆ ಡಾ.ಇಂದಿರಾ

ಹಾಸನ (ಮಾ.1): ಸಾಮಾಜಿಕ ವಿಜ್ಞಾನ ಹಾಗೂ ಸಾಮಾಜಿಕ ಸಂಶೋಧನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯ ಎಂದು ದೆಹಲಿ ಸಮಾಜಶಾಸ್ತ್ರಜ್ಞರ ಸಂಘದ ಅಧ್ಯಕ್ಷೆ ಡಾ.ಆರ್.ಇಂದಿರಾ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಹಾಗೂ ಐಕ್ಯೂಎಸಿ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಸ್ತುತ ಸಮಾಜ ವಿಜ್ಞಾನದಲ್ಲಿ ಎದುರಿಸುತ್ತಿರುವ ಸವಾಲುಗಲು ಎಂಬ ವಿಷಯದ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ವಿಜ್ಞಾನದಲ್ಲಿ ಶ್ರೇಣಿಕೃತ ವ್ಯವಸ್ಥೆ ಇದೆ. ಸಮಾಜ ವಿಜ್ಞಾನದ ಮೇಲೆ ಕಳೆದ 20 ವರ್ಷಗಳಿಂದ ಅನೇಕ ಸಂಶೋಧನೆಗಳು ನಡೆದಿದೆ. ಜಾಗತೀಕರಣದ ಪ್ರಭಾವನ್ನು ಜಾಗತೀಕರಣ ನುಂಗಿ ಹಾಕಿದ್ದು, ಜಾಗತೀಕರಣವನ್ನು ಬಳಸಿಕೊಂಡು ನಮ್ಮ ಸಮಾಜಿಕ ಸಂಶೋಧನೆಗಳನ್ನು ಯಶಸ್ವಿಗೊಳಿಸಿಕೊಳ್ಳಬೇಕು.

ಮಕ್ಕಳಲ್ಲಿ ಸೈದ್ದಾಂತಿಕ ನಿಲುವುಗಳನ್ನು ಬಿತ್ತುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಬದುಕಿನಲ್ಲಿ ಸವಾಲುಗಳು ಇದ್ದರೆ ಸಾಧನೆ ಮಾಡಲು ಸಾಧ್ಯ, ಹಾಗಾಗಿ ಪ್ರತಿಯೊಬ್ಬರು ಸಮಾಜದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಸಮಾಜದ ಪರವಾಗಿ ಧ್ವನಿ ಎತ್ತುವುದು ಸಮಾಜಶಾಸ್ತ್ರಜ್ಞರ ಕರ್ತವ್ಯವಾಗಿದೆ. ಸಮಾಜ ವಿಜ್ಞಾನಗಳ ಔಚಿತ್ಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಆದರೇ ಸಾರ್ವಜನಿಕ ವಲಯದಲ್ಲಿ ಇದು ಸಾಕಷ್ಟು ಚರ್ಚೆಗೆ ಒಳಪಡಲಿಲ್ಲ. ಇದರ ಅರ್ಥವಾಗಿಲ್ಲ. ಸಾಮಾಜಿಕ ವಿಜ್ಞಾನಗಳ ಸಂಶೋಧನೆಯ ಉದ್ದೇಶಗಳು ಜನ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಸಾಮಾಜಿಕ ಹೋರಾಟಗಳಲ್ಲಿ ಉದಾಹರಣೆ ನೀಡಬಹುದಾದು ಎಂದರೆ ಕಳೆದ 30 ವರ್ಷಗಳ ಹಿಂದೆ ಆರಂಭವಾದ ಮಹಿಳಾ ಚಳುವಳಿ. ಹೆಣ್ಣು ಮಕ್ಕಳು ಸರಕಾರಿ ಶಾಲೆಗಳಲ್ಲಿ ಶೌಚಾಲಯ ಕಡಿಮೆ ಇರುವುದಕ್ಕೆ ಶಾಲೆಗೆ ಹೆಣ್ಣು ಮಕ್ಕಳ ಸೇರುತ್ತಿರಲಿಲ್ಲ ಎಂಬುವುದನ್ನು ಅಂದು ಸಮಾಜಿಕ ಹೋರಾಟದ ಮೂಲಕ ಸಮಾಜದ ಗಮನ ಸೆಳೆದಾಗ. ಇದೀಗ ಸರಕಾರಗಳು ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಮೊದಲು ಕಲ್ಪಿಸುತ್ತಿದೆ ಎಂದು ಹೇಳಿದರು.

ದಾವಣೆಗೆರೆ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸಮಾಜ ಎಂಬುವುದು ವಿಜ್ಞಾನದ ಪ್ರಯೋಗಾಲಯ ಇದ್ದಂತೆ, ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸುವ ಸಮಾಜಶಾಸ್ತ್ರಜ್ಞರು ಸಮಾಜದ ಅಭಿವೃದ್ಧಿಗೆ ಪೂರಕವಾದ ಸಂಶೋಧನೆಗಳನ್ನು ನಡೆಸಬೇಕು. ಸಾಮಾಜಿಕ ವಿಜ್ಞಾನಗಳಿಗೆ ಸಮಾಜವನ್ನು ಹೇಗೆ ಒಂದುಗೂಡಿಸಬೇಕು ಎಂಬ ಮನೋಧರ್ಮ ಇರಬೇಕು. ಸಾಮಾಜಿಕ ವಿಜ್ಞಾನವು ಸಂಶೋಧನೆಯಲ್ಲಿ ಉನ್ನತ ಸಾಧನೆಗೈದಿದ್ದರೂ ಇತರೆ ವಿಜ್ಞಾನಗಳಂತೆ, ಪ್ರಯೋಗಗಳಿಂದ ಫಲಿತಾಂಶ ನೀಡುವುದರಲ್ಲಿ ಹಾಗೂ ತನ್ನ ಕೊಡುಗೆಯನ್ನು ನೀಡುವುದರಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ. ಜನರು ಸಾಮಾಜಿಕ ಬೆಳವಣಿಗೆಯ ಯೋಜನೆಗಳಲ್ಲಿ ಸಹಕಾರ ಭಾವನೆಯಿಂದ ಪಾಲ್ಗೊಳ್ಳಬೇಕು. ಸಾಮಾಜಿಕ ಐಕ್ಯತೆಗೆ ದಕ್ಕೆಯನ್ನುಂಟು ಮಾಡುವ ಅಂಶಗಳ ಬಗ್ಗೆ ಅಧ್ಯಯನ ನಡೆಸುವುದು ಪ್ರತಿ ಸಮಾಜ ಶಾಸ್ತ್ರಜ್ಞರ ಕರ್ತವ್ಯ. ಸಮಾಜ ವಿಜ್ಞಾನವು ಮಾನವೀಯತೆ, ವೈಜ್ಞಾನಿಕ ಆಲೋಚನೆಗಳು ಹಾಗೂ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಯಾವ ತರಹದ ಸಂಶೋಧನೆ ಬೇಕು ಎಂಬುದನ್ನು ಸಮಾಜ ವಿಜ್ಞಾನ ಬೆಳಕಿಗೆ ತಂದು ಮನುಷ್ಯರನ್ನು ಒಟ್ಟುಗೂಡಿಸುವ ಕೆಲಸವಾಗುತ್ತದೆ. ಸಮಾಜ ವಿಜ್ಞಾನದ ಮುಖ್ಯ ಕೆಲಸ ಸಾಮಾಜಿಕ ವರ್ತನೆಯನ್ನು ಪರಿವರ್ತನೆ ಮಾಡುವುದು ಎಂದು ಹೇಳಿದರು.

ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಕಲಿಕೆಗೆ ಉತ್ತಮ ಅವಕಾಶಗಳು ಇದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರಕಾರಿ ಕಾಲೇಜುಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಸರಕಾರಿ ಕಾಲೇಜುಗಳು ಹೆಚ್ಚಾಗಿ ಇರುವುದರಿಂದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಮೊಹನ್ ಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಮಾಜದ ಆಗು ಹೋಗುಗಳ ಬಗ್ಗೆ ಜನ ಪ್ರತಿನಿಧಿಗಳ ಗಮನ ಸೆಳೆಯಲು ಸಾಮಾಜಿಕ ಸಂಶೋಧನೆಗಳು ಅಗತ್ಯವಾಗಿದೆ ಎಂದು ಹೇಳಿದರು.  ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಶಿಕುಮಾರ್, ಐಕ್ಯೂಎಸಿ ಸಂಚಾಲಕ ಕೆ.ಡಿ. ಮುರಳೀಧರ ಹಾಜರಿದ್ದರು. (ಎನ್‍ಬಿ)

Leave a Reply

comments

Related Articles

error: