ಪ್ರಮುಖ ಸುದ್ದಿಮೈಸೂರು

ಮಾ.9 -11ರವರೆಗೆ ನಗರದಲ್ಲಿ ‘ವಿಜ್ಞಾನ ನಾಟಕೋತ್ಸವ- ರಾಷ್ಟ್ರೀಯ ವಿಚಾರ ಸಂಕಿರಣ’

ಮೈಸೂರು, ಮಾ.2 : ನಗರದ ಪರಿವರ್ತನ ರಂಗ ಸಮಾಜ, ಕಲಾಸುರುಚಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಾ. 9 ರಿಂದ 11 ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಮೈಸೂರು ವಿಜ್ಞಾನ ನಾಟಕೋತ್ಸವ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿರುವುದಾಗಿ ಹಿರಿಯ ರಂಗಕರ್ಮಿ ಎಸ್.ಆರ್. ರಮೇಶ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 9 ರಂದು ಸಮತೆಂತೋ ವತಿಯಿಂದ ‘ಪ್ರೂಫ್’, 10 ರಂದು ಪರಿವರ್ತನ ಸಂಸ್ಥೆಯಿಂದ ‘ಬ್ರೋಕನ್ ಬ್ಲಾಸಂ’, 11 ರಂದು ಪರಿವರ್ತನದಿಂದಲೇ ಕೂಪನ್ ಹೇಗನ್ ನಾಟಕ ಪ್ರದರ್ಶಿತಗೊಳ್ಳಲಿವೆ. ನಿತ್ಯ ಸಂಜೆ 7 ಕ್ಕೆ ಈ ನಾಟಕ ಆರಂಭವಾಗಲಿವೆ.

ಇನ್ನು ಮಾ. 11 ರಂದು ಬೆಳಗ್ಗೆ 10.30ಕ್ಕೆ ವಿಜ್ಞಾನ, ಕಲೆ ಮತ್ತು ಸಾಹಿತ್ಯ, 11.45ಕ್ಕೆ ವಿಜ್ಞಾನ, ರಂಗಭೂಮಿ ಮತ್ತು ಸಾಮಾಜಿಕ ಪಲ್ಲಟ, ಮಧ್ಯಾಹ್ನ 1ಕ್ಕೆ ವಿಜ್ಞಾನ ಮತ್ತು ರಂಗಭೂಮಿ- ಸಾಧ್ಯತೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ವಿಜ್ಞಾನ ಮತ್ತು ಸಾಹಿಯ ಸಮಾಜದ ಎರಡು ಸಂಸ್ಕೃತಿಗಳಾಗಿದ್ದು, ಹದಿನಾರನೇ ಶತಮಾನದಿಂದೀಚೆಗೆ ಸಮಾಜದ ಎಲ್ಲ ಪ್ರಮುಖ ಪ್ರಕ್ರಿಯೆಗಳಲ್ಲಿ ಮುಖ್ಯ ಪಾತ್ರ ವಹಿಸಿವೆ. ಧರ್ಮದ ಪ್ರಾಬಲ್ಯವನ್ನು ಅಂಚಿಗೆ ಸರಿಸಿದ ವಿಜ್ಞಾನ ಸಮಾಜದ ಬೆಳವಣಿಗೆಯಲ್ಲಿ ಅಗ್ರ ಸ್ಥಾನ ವಹಿಸಿದೆ. ಆದರೂ ವಿಜ್ಞಾನ ಮತ್ತು ಸಾಹಿತ್ಯ ಬುದ್ಧಿಜೀವಿಗಳ ನಡುವಿನ ಸಂಬಂಧ, ಅನುಮಾನ, ಶಂಕೆ, ಸಂಶಯ, ಅಪನಂಬಿಕೆಗಳಿಂದ ಜಟಿಲಗೊಂಡಿದೆ.

ಇತ್ತೀಚಿನ ಪಾಶ್ಚಾತ್ಯ ರಂಗಭೂಮಿಯಲ್ಲಿ ವಿಜ್ಞಾನ ಸಂಬಂಧಿತ ನಾಟಕಗಳು ವಿಪುಲವಾಗಿ ಪ್ರಕಟವಾಗಿ, ಪ್ರಯೋಗಗೊಳ್ಳುತ್ತಿದ್ದರೂ ಕನ್ನಡದಲ್ಲಿ ವಿಜ್ಞಾನ ನಾಟಕಗಳು ತೀರಾ ವಿರಳವಾಗಿವೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ನಾಟಕಗಳನ್ನು ಕನ್ನಡ ರಂಗಭೂಮಿಯಲ್ಲಿ ನೋಡಬೇಕೆಂಬುದು ಈ ನಾಟಕೋತ್ಸವದ ಉದ್ದೇಶ ಮತ್ತು ಆಶಯವಾಗಿದೆ ಎಂದು ವಿವರಿಸಿದರು.

ಶಿವಾಜಿರಾವ್ ಜಾಧವ್, ಡಾ.ಎಂ.ಸಿ. ಮನೋಹರ, ಮಾಧವ ಖರೆ, ತೇಜಸ್ವಿನಿ ಜೋಯಿಸ್, ಅರುಣ್ ಮೂರ್ತಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: