
ಮೈಸೂರು
ಇಮ್ಮಡಿ ಶಿವಬಸವ ಸ್ವಾಮೀಜಿ ಲಿಂಗೈಕ್ಯ
ಮೈಸೂರು ನಗರದ ಅಗ್ರಹಾರದ ಕುಂದೂರು ಮಠದ ಶ್ರೀ ಡಾ. ಇಮ್ಮಡಿ ಶಿವಬಸವ ಸ್ವಾಮೀಜಿ ಗುರುವಾರ ಸಂಜೆ 6ಗಂಟೆಗೆ ಲಿಂಗೈಕ್ಯರಾದರು.
ಚಾಮರಾಜ ತಾಲೂಕು ಕೊಡಿಮೋಳೆ ಬಸವಪುರದ ಶರಣ ದಂಪತಿಗಳಾದ ತಂದೆ ಸಿದ್ದಲಿಂಗದೇವರು ತಾಯಿ ಕೆಂಪನಂಜಮ್ಮ ಅವರ ಮಗನಾಗಿ ನವೆಂಬರ್ 10, 1939ರಲ್ಲಿ ಜನಿಸಿದ್ದರು. 1952ರಲ್ಲಿ ಕುಂದೂರು ಮಠದ ವಿರಕ್ತಾಶ್ರಮವನ್ನು ಸ್ವೀಕರಿಸಿ, ಮೈಸೂರು ವಿವಿಯಲ್ಲಿ ಎಂ.ಎ. ಸಂಸ್ಕೃತ ಪಿ.ಹೆಚ್.ಡಿ.ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಬಳಿಕ ಮೈಸೂರು ವಿವಿಯಲ್ಲಿಯೇ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯವನ್ನು ಪಡೆದಿದ್ದರು. ಸುತ್ತೂರು ಮಠದ ರಾಜೇಂದ್ರ ಸ್ವಾಮಿಗಳು ಹಾಗೂ ಕರ್ನಾಟಕದ ಹಲವು ವೀರಶೈವ ಮಠಾಧಿಪತಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.
ರಮಣಶ್ರೀ, ಸಂ.ಶಿ.ಭೂಸನೂರು ಮಠ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಗಳು ಸರ್ವದರ್ಶನ ಸಂಗ್ರಹ, ಸಿದ್ಧಾಂತ ಶಿಖಾಮಣಿ, ಶ್ರೀಕರ ಭಾಷ್ಯ ನಿಜದ ನಿಲುವು, ಕರಣಹಸಿಗೆ, ವಚನಗಳಲ್ಲಿ ಸಂಸ್ಕೃತೋಕ್ತಿಗಳು ಸೇರಿದಂತೆ ಇನ್ನೂ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ.