
ಮನರಂಜನೆ
“ಯಶ್—ರಾಧಿಕಾ” ವಿನೂತನ ಆಹ್ವಾನ

ಇತ್ತೀಚೆಗೆ ಸದಾ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುವ ಚಿತ್ರನಟ ಯಶ್, ಈಗ ಮತ್ತೊಮ್ಮೆ ವಿಶೇಷ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.
ಸ್ಯಾಂಡಲ್ವುಡ್ನ ‘ಮಿಸ್ಟರ್ & ಮಿಸಸ್ ರಾಮಾಚಾರಿ’ ಎಂದೇ ಕರೆಯಲ್ಪಡುವ ಯಶ್-ರಾಧಿಕ ಜೋಡಿ ಡಿ.10 ಮತ್ತು 11 ಕ್ಕೆ ಮದುವೆಯಾಗುತ್ತಿರುವುದು ನಿಮಗೆಲ್ಲ ಈಗಾಗಲೇ ಗೊತ್ತಿರುವ ಸುದ್ದಿ. ಈ ಯುವ ಜೋಡಿ ತಮ್ಮ ವಿವಾಹದ ವಿನೂತನ ‘ಕರೆಯೋಲೆ’ಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶೇಷವೇನು ಅಂದ್ರಾ..? ಯಶ್-ರಾಧಿಕಾ ಜೋಡಿ ತಮ್ಮ ಮದುವೆಯ ಆಮಂತ್ರಣದ ಪತ್ರಿಕೆಯೊಂದಿಗೆ ಗಿಡ ಮತ್ತು ಪುಸ್ತಕವೊಂದನ್ನು ನೀಡಿ ಚಿತ್ರರಂಗದ ಗಣ್ಯರನ್ನು ವಿನೂತನವೆನ್ನಬಹುದಾದ ರೀತಿ ಆಹ್ವಾನಿಸುತ್ತಿದ್ದಾರೆ.
ನಿರ್ದೇಶಕ ಎ.ಪಿ. ಅರ್ಜುನ್ ರವರು ಬರೆದುಕೊಟ್ಟಿರುವ ಸಾಲುಗಳನ್ನೊಳಗೊಂಡ ಆಮಂತ್ರಣ ಪತ್ರಿಕೆಯೊಂದಿಗೆ ಸಂಪಿಗೆ ಸಸಿ ಮತ್ತು ಜೋಗಿಯವರು ಬರೆದಿರುವ “ಲೈಫ್ ಈಸ್ ಬ್ಯೂಟಿಫುಲ್” ಪುಸ್ತಕ ನೀಡಿ ಯಶ್ ತಮ್ಮ ಪರಿಸರ ಕಾಳಜಿ ಮತ್ತು ಪುಸ್ತಕ ಪ್ರೀತಿ ಮೆರೆದಿದ್ದಾರೆ. ತಮ್ಮ ಪುಸ್ತಕದ ಸಾವಿರ ಪ್ರತಿಗಳನ್ನು ಯಶ್ ಖರೀದಿಸಿರುವ ಬಗ್ಗೆ ಜೋಗಿ ಯವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಅದೇ ರೀತಿ ರಾಧಿಕಾ ಪಂಡಿತ್ರವರ ಮನೆಯ ಆಮಂತ್ರಣ ಪತ್ರಿಕೆಯು ಸದ್ದುಮಾಡುತ್ತಿದೆ. ಮರದ ಫ್ರೇಮ್ ಇರುವ ರಾಧಿಕಾ ಪಂಡಿತ್ ಮನೆ ಕಡೆಯವರ ಈ ಆಮಂತ್ರಣ ಪತ್ರಿಕೆಗೆ ಸಾಮಾಜಿಕ ತಾಣದಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವ-ಪಾರ್ವತಿಯರ ಚಿತ್ರವಿರುವ ಆಮಂತ್ರಣ ಪತ್ರಿಕೆಯನ್ನು ರಾಧಿಕಾ ಪಂಡಿಂತ್ ರವರು ತಮ್ಮ ಫೇಸ್ಬುಕ್ ವಾಲ್ನಲ್ಲಿ ಪ್ರಕಟಿಸಿದ್ದಾರೆ.
ಯಶ್ ಈಗಾಗಲೇ ಚಿತ್ರರಂಗದ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ ಅವರಿಗೆ ಆಹ್ವಾನಪತ್ರಿಕೆ ನೀಡಿದ್ದು, ಚಿತ್ರರಂಗದ ಇನ್ನೂ ಹಲವು ಗಣ್ಯರು, ಆಪ್ತರಿಗೆ ಆಹ್ವಾನ ನೀಡಲಿದ್ದಾರೆ.

