Uncategorized

ರಾಜ್ಯ ರಾಜಕಾರಣದಲ್ಲಿ ಬದಲಾವಣೆ : ಬಿ.ಎ.ಜೀವಿಜಯ ವಿಶ್ವಾಸ

ರಾಜ್ಯ(ಮಡಿಕೇರಿ) ಮಾ.2:- ರಾಜ್ಯ ರಾಜಕೀಯದಲ್ಲಿ ಬದಲಾವಣೆ ಕಾಲ ಸಮೀಪಿಸಿದೆ ಎಂದು ಅಭಿಪ್ರಾಯಪಟ್ಟಿರುವ ಜಾತ್ಯಾತೀತ ಜನತಾದಳದ ಹಿರಿಯ ಮುಖಂಡರಾದ ಬಿ.ಎ.ಜೀವಿಜಯ, ರಾಷ್ಟ್ರೀಯ ಪಕ್ಷಗಳಿಂದ ಭ್ರಮನಿರಸನಗೊಂಡಿರುವ ಜನತೆ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಜೆಡಿಎಸ್‍ಗೆ ಬಹುಮತ ನೀಡಲಿದ್ದಾರೆ ಎಂದರು.

ನಗರದ ಚಿಕ್ ಕಾಂಪ್ಲೆಕ್ಸ್‍ನಲ್ಲಿ ಜಿಲ್ಲಾ ಜಾತ್ಯತೀತ ಜನತಾದಳದ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ನಿರೀಕ್ಷೆಗಳಂತೆ ಕುಮಾರಸ್ವಾಮಿಯವರನ್ನು ಅಧಿಕಾರಕ್ಕೆ ತರಲು ಪಕ್ಷ ಸಂಘÀಟನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು. ಪಕ್ಷದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಜೆಡಿಎಸ್ ಗೆಲುವಿಗೆ ಸಂಘಟಿತವಾಗಿ ಪ್ರಯತ್ನಶೀಲರಾಗಬೇಕೆಂದು ಕರೆ ನೀಡಿದರು. ಚುನಾವಣೆಯ ಹೊಸ್ತಿಲಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕುಮಾರಸ್ವಾಮಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಅವುಗಳ ಬಗೆಹರಿಕೆಗೆ ಕಾನೂನುಗಳನ್ನು ರೂಪಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡಿದ್ದರು, ಅಧಿಕಾರಿಶಾಹಿಗಳು ಅದರ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಜೀವಿಜಯ ಇಂತಹ ಅಧಿಕಾರಶಾಹಿ ವರ್ತನೆಗೆ ಮುಂಬರುವ ದಿನಗಳಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಆಡಳಿತದಲ್ಲಿ ‘ಅಂಕುಶ’ ಬೀಳಲಿದೆ ಎಂದರು.

ತಮ್ಮ ಪಕ್ಷಕ್ಕೆ ಅಧಿಕಾರವನ್ನು ನೀಡಿದಲ್ಲಿ ರಾಜ್ಯದ ಬೊಕ್ಕಸಕ್ಕೆ ಬರುವ ಹಣವನ್ನು ಜನರ ಕಲ್ಯಾಣಕ್ಕೆ ಸದ್ವಿನಿಯೋಗಪಡಿಸುವ ಕಾರ್ಯಯೋಜನೆಗಳು ಅನುಷ್ಠಾನಗೊಳ್ಳುವ ವಿಶ್ವಾಸವಿದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಜಾತ್ಯಾತೀತ ಜನತಾದಳ ಕೇವಲ ಚುನಾವಣೆ ಆಧಾರಿತ ಪಕ್ಷವಲ್ಲ. ಶ್ರೀಸಾಮಾನ್ಯರ ರೈತಾಪಿ ವರ್ಗದ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದು, ಅದು ಚುನಾವಣೆ ಇದ್ದರೂ ಇಲ್ಲದಿದ್ದರೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಮುಂದಿನ 67 ದಿನಗಳ ಅವಧಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಹಾಗೂ ಬಿ.ಎ. ಜೀವಿಜಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರು. ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳು ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತದ ಅವಧಿಯಲ್ಲಿ ಬಗೆಹರಿದಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ನಿಷ್ಕ್ರೀಯವಾಗಿದ್ದರೆ, ಇಲ್ಲಿನ ಶಾಸಕರು ಸಮಸ್ಯೆ ಬಗೆಹರಿಕೆಯ ನಿಟ್ಟಿನಲ್ಲಿ ವಿಫಲರಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಜನತೆ ಕುಮಾರಸ್ವಾಮಿ ಅವರನ್ನು ಅಧಿಕಾರಕ್ಕೆ ತರಲು ಜೆಡಿಎಸ್‍ಗೆ ಮತಹಾಕಲು ನಿರ್ಧರಿಸಿದ್ದಾರೆಂದು ತಿಳಿಸಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಮಾತನಾಡಿ, ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ರಾಷ್ಟ್ರೀಯ ಪಕ್ಷಗಳು ಪಾದಯಾತ್ರೆ, ಜಾಥ ಮಾಡಲು ಮುಂದಾಗಿರುವುದನ್ನು ಟೀಕಿಸಿದರು. ತಾವು ಗೆಲ್ಲುವುದಿಲ್ಲ ಎನ್ನುವ ಭಯದಿಂದ ಜನರಲ್ಲಿ ಗೊಂದಲ ಮೂಡಿಸಿ ಗೆಲ್ಲುವ ಪ್ರಯತ್ನಕ್ಕೆ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ. ಆದರೆ, ಅದು ಹಗಲು ಕನಸೆಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ನಗರ ಜೆಡಿಎಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪಕ್ಷದ ಪ್ರಮುಖರಾದ ಎಸ್.ಎನ್.ರಾಜಾರಾವ್, ಡಾ. ಯಾಲದಾಳು ಮನೋಜ್ ಬೋಪಯ್ಯ, ಕೆ.ಎಂ. ಗಣೇಶ್, ಲೀಲಾ ಶೇಷಮ್ಮ, ಸಂಗೀತ ಪ್ರಸನ್ನ, ಇಸಾಕ್ ಖಾನ್, ಜಾಷೀರ್ ಮೊದಲಾದವರು ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: