ದೇಶಪ್ರಮುಖ ಸುದ್ದಿ

ವಿಪಕ್ಷಗಳ ಟೀಕೆಗಳಿಗೆ ಪ್ರಧಾನಿ ಮೋದಿ ಟಾಂಗ್

ನೋಟು ರದ್ದತಿ ಬಗ್ಗೆ ಕೇಂದ್ರ ಸರಕಾರ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಇದರಿಂದ ದೇಶದ ಜನರಿಗೆ ತೊಂದರೆಯುಂಟಾಗಿದೆ ಎಂಬ ವಿಪಕ್ಷಗಳ ಟೀಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸರಕಾರ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ನೋಟು ರದ್ದು ಮಾಡಬಾರದಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ. ಸರಕಾರ ಅವರಿಗೆ ಸಿದ್ಧತೆ ಮಾಡಿಕೊಳ್ಳಲು ಕಾಲಾವಕಾಶ ನೀಡಿಲ್ಲ ಎನ್ನುವುದೇ ಅವರ ನೋವಿಗೆ ಕಾರಣ. ಒಂದು ವೇಳೆ ನೋಟು ರದ್ದಿನ ಬಗ್ಗೆ ಮುನ್ಸೂಚನೆ ನೀಡಿ ಕ್ರಮ ಕೈಗೊಂಡಿದ್ದಲ್ಲಿ, ವ್ಹಾವ್‍ ವ್ಹಾವ್ ಮೋದಿ ಜೈಸ ಕೋಯಿ ನಹಿ(ವರೆವ್ಹಾ ಮೋದಿ ಅವರಿಗೆ ಯಾರೂ ಸರಿಸಾಟಿಯಿಲ್ಲ) ಎಂದು ಹಾಡಿ ಹೊಗಳುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಸಂಸತ್ತಿನ ಬಳಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯವಿತ್ತು. ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೆ ಕಾಳಧನಿಕರಿಗೆ ಅನುಕೂಲವಾಗುತ್ತಿತ್ತು. ಈಗ ಕಾಳಧನಿಕರು ದಿನವೂ ಚಿಂತೆಯಲ್ಲೇ ದಿನ ದೂಡಬೇಕಾದ ಪರಿಸ್ಥಿತಿ ಬಂದೊದಗಿದೆ. ತೆರಿಗೆ ಹಣ ಕಟ್ಟದೆ ವಂಚಿಸುತ್ತಿದ್ದವರೆಲ್ಲ ಈಗ ತೆರಿಗೆ ಹಣ ಕಟ್ಟಲು ಪೈಪೋಟಿ ನಡೆಸುತ್ತಿದ್ದಾರೆ. ನೋಟು ಅಮಾನ್ಯದಿಂದ ಸಾಮಾನ್ಯ ಜನರಿಗೆ ಏನು ತೊಂದರೆಯಾಗಿಲ್ಲ. ಅವರ ಶ್ರಮದ ಹಣ ಅವರ ಬಳಿ ಸುರಕ್ಷಿತವಾಗಿ ಇರಲಿದೆ ಎಂದು ಹೇಳಿದರು.

ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಮೊಬೈಲ್ ತಂತ್ರಜ್ಞಾನ ಬಳಸಿ ಹಣ ಪಾವತಿ ಮಾಡಬಹುದಲ್ಲವೇ? ಎಲ್ಲರಿಗೂ ಅವರವರ ಹಣ ಬಳಸುವ ಅಧಿಕಾರವಿದೆ. ಆದರೆ, ಈಗ ಜಗತ್ತು ಬದಲಾಗುತ್ತಿದೆ. ಹಣ ಕೇವಲ ನಗದಾಗಿ ಮಾತ್ರವಲ್ಲ, ಡಿಜಿಟಲ್‍ ಮೂಲಕವೂ ಬಳಸಬಹುದು. ಡಿಜಿಟಲ್‍ ಸಹಾಯದಿಂದ ಹಣ ಬಳಕೆ ಮಾಡುವುದನ್ನು ಎಲ್ಲರೂ ಆರಂಭಿಸಬೇಕೆಂದು ಮೋದಿ ಅವರು ಅಭಿಪ್ರಾಯಪಟ್ಟರು.

Leave a Reply

comments

Related Articles

error: