ಪ್ರಮುಖ ಸುದ್ದಿಮೈಸೂರು

ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಸುಳಿವು ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಮೈಸೂರು,ಮಾ.3:- ಶನಿವಾರ ನಗರಕ್ಕಾಗಮಿಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ಸುಳಿವನ್ನು ನೀಡಿದ್ದಾರೆ.

ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ಟಿಕೇಟ್ ಬೇಕು ಅಂತ ಅಪೇಕ್ಷ ಪಡುವಲ್ಲಿ ತಪ್ಪೇನಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಇನ್ನು ಅಭ್ಯರ್ಥಿ ಫೈನಲ್ ಆಗಿಲ್ಲ. ಹಾಗಾಗಿ ಅವರು ಟಿಕೆಟ್ ಕೇಳುತ್ತಿದ್ದಾರೆ. ಆ ಬಗ್ಗೆ ಪಕ್ಷದ ಒಳಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಪಕ್ಷದಲ್ಲಿ ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಅವರಿಗೆ ಗೆಲ್ಲುವ ಸಾಮರ್ಥ್ಯವಿದ್ದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಟಿಕೇಟ್ ವಿಚಾರದಲ್ಲಿ ಕಾಲ ನಿರ್ಧಾರ ಮಾಡಲಿದೆ ಎನ್ನುವ ಮೂಲಕ  ಪ್ರಜ್ವಲ್ ಸ್ಪರ್ಧೆ ಬಗ್ಗೆ ಸುಳಿವು ಬಿಟ್ಟುಕೊಟ್ಟು ಇಲ್ಲಿಯವರೆಗೆ ನಮ್ಮ ಕುಟುಂಬದಲ್ಲಿ ಇಬ್ಬರೇ ಸ್ಪರ್ಧೆ ಎಂದು ಹೇಳುತ್ತಿದ್ದ ಹೆಚ್.ಡಿ.ಕೆ. ಇದೀಗ ದಿಢೀರ್ ಉಲ್ಟಾ ಹೊಡೆದಿದ್ದಾರೆ.

ಇದೇ ವೇಳೆ ಮತ್ತೆ ಸಂದೇಶ್ ಬ್ರದರ್ಸ್ ವಿರುದ್ಧ ವಾಗ್ದಾಳಿ‌ ನಡೆಸಿದರು. ತಮ್ಮನಿಗೆ ಟಿಕೇಟ್ ನೀಡದಿದ್ದರೆ ಪರಿಷತ್ ಗೆ ರಾಜೀನಾಮೆ ನೀಡುತ್ತೇನೆ ಎಂಬ ಸಂದೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜೀನಾಮೆ ನೀಡುವವರು ಪರಿಷತ್ ಸ್ಥಾನಕ್ಕೆ ಯಾಕೆ ನಿಂತರು  ಎಂದು ಸಂದೇಶ್ ನಾಗರಾಜ್ ಗೆ ಪ್ರಶ್ನೆ ಹಾಕಿದರು. ರಾಜೀನಾಮೆ ನೀಡುವವರು ಚುನಾವಣೆಗೆ ನಿಲ್ಲಬಾರದಿತ್ತು. ಪಕ್ಷ ಹಾಗೂ ಕಾರ್ಯಕರ್ತರು ಅವರ ಕೈ ಹಿಡಿದಿದ್ದಾರೆ. ಅದನ್ನ ಬಿಟ್ಟು ಅವರು ಪಕ್ಷದಿಂದ ಹೋಗುತ್ತೇನೆ ಅಂದರೆ ನಾನೂ ಏನು ಮಾಡಲಿ.  ಅವರು ಬಿಜೆಪಿಗೆ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಯಾರೆ ಹೋದರೂ ನಮಗೆ ನಷ್ಟವಿಲ್ಲ. ಹೋಗುವವರನ್ನು ಬೇಡ ಎನ್ನಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಮೊದಲ ಪಟ್ಟಿಯ ಅಭ್ಯರ್ಥಿಗಳ ಪರಿಷ್ಕರಣೆ ಆಗುವುದಿಲ್ಲ. ಸಂದೇಶ್ ಬ್ರದರ್ಸ್ ನನ್ನ ಬೆಂಬಲಿಗರು ಎಂದುಕೊಂಡಿದ್ದೆ. ಈಗ ಅವರು ತಾವು ರೇವಣ್ಣ ಬೆಂಬಲಿಗರು ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಕುಮಾರಸ್ವಾಮಿ, ರೇವಣ್ಣ ಬಣ ಎಂಬುದಿಲ್ಲ. ನಮ್ಮದು ಜೆಡಿಎಸ್ ಬಣ ಅಷ್ಟೇ ಎಂದರು.

20 ತಿಂಗಳ ಸರ್ಕಾರದ ಸಾಧನೆಯ ಕ್ರೆಡಿಟ್  ನನ್ನದೆಂಬ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಎಲ್ಲಾ ಸಾಧನೆ ಅವರೇ ತೆಗೆದುಕೊಳ್ಳಲಿ. ಇದರ ಜೊತೆಗೆ ಜೈಲಿಗೆ ಹೋಗಿ ಬಂದ ಕ್ರೆಡಿಟ್ ಕೂಡ ಅವರೇ ಪಡೆಯಲಿ. ಕಮಿಷನ್ ಪಡೆಯುವ ವ್ಯವಸ್ಥೆ ಸೃಷ್ಟಿಸಿದ ಕ್ರೆಡಿಟ್ ಎಲ್ಲವನ್ನು ಅವರೇ ಪಡೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನ ಅಭ್ಯಂತರವೇನಿಲ್ಲ ಎಂದು ಬಿಎಸ್,ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.

ಈ ಸಂದರ್ಭ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಜೆಡಿಎಸ್ ಪ್ರಮುಖರು ಕುಮಾರಸ್ವಾಮಿಯವರ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: