ದೇಶಪ್ರಮುಖ ಸುದ್ದಿ

ತ್ರಿಪುರಾ, ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಅಲೆ: ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ

ಹೊಸದಿಲ್ಲಿ (ಫೆ.3): ದೇಶದ ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಬಿಜೆಪಿ ಅಲೆ ಎದ್ದುಕಾಣಿಸಿದೆ. ಮೂರು ರಾಜ್ಯಗಳ ಪೈಕಿ ತ್ರಿಪುರಾದಲ್ಲಿ ಶೂನ್ಯದಿಂದ ಭರ್ಜರಿ ಬಹುಮತ ಗಳಿಸಿ ಬಿಜೆಪಿ ಅಚ್ಚರಿ ಮೂಡಿಸಿದೆ. ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಮೈತ್ರಿಕೂಟ ಹೆಚ್ಚುಸ್ಥಾನಗಳನ್ನು ಗಳಿಸಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ.

ಬಿಜೆಪಿಯ ಈ ಜಯಭೇರಿಗೆ ಆ ರಾಜ್ಯಗಳ ಜನರಲ್ಲಿದ್ದ ಆಡಳಿತ ವಿರೋಧಿ ಅಲೆ, ಬಿಜೆಪಿಯ ಚಾಣಾಕ್ಷತನದ ಪ್ರಾದೇಶಿಕ ಪಕ್ಷಗಳೊಂದಿಗಿನ ಮೈತ್ರಿಯೇ ಕಾರಣ ಎಂದು ಹೇಳಲಾಗುತ್ತಿದೆ.

ಎಡಪಕ್ಷದ ಭದ್ರಕೋಟೆಯೆನಿಸಿದ್ದ ತ್ರಿಪುರಾವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ನಾಗಾಲ್ಯಾಂಡ್‌ನಲ್ಲಿ ಪ್ರಾದೇಶಿಕ ಪಕ್ಷದ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿ ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್‌ – ಎನ್‌ಪಿಎಫ್‌ ಅನ್ನು ಕೆಳಕ್ಕಿಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್‌ ಸೊನ್ನೆ ಸುತ್ತಿದೆ.

ಮೇಘಾಲಯದಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಿಜೆಪಿಯು ಮೈತ್ರಿಕೂಟದ ಪಕ್ಷಗಳ ಮತ್ತು ಇತರರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರುವ ಕಸರತ್ತು ನಡೆಸಿದೆ.

ಬಿಜೆಪಿ ಈಗಾಗಲೇ ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ತನ್ನ ಅಧಿಕಾರ ಸ್ಥಾಪಿಸಿತ್ತು. ಇದೀಗ ಇಂದಿನ ಫಲಿತಾಂಶದೊಂದಿಗೆ ಈ ಭಾಗದ ಇನ್ನೂ ಎರಡು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗುವುದು ಖಚಿತವಾಗಿದೆ. ಐದು ವರ್ಷಗಳ ಹಿಂದೆ ಈಶಾನ್ಯ ಭಾರತದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ ಎಂಬುದು ಗಮನ ಸೆಳೆಯುವ ವಿಷಯವಾಗಿದೆ.

ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, “ಸಂಪೂರ್ಣ ಈಶಾನ್ಯ ಭಾರತ ಬಿಜೆಪಿ ವಶಕ್ಕೆ ಬಂದಿದೆ. ಕಾಂಗ್ರೆಸ್‌ಮುಕ್ತ ಭಾರತದ ಘೋಷಣೆ ಮಾಡಿದ್ದೆವು. ಈಗ ಅದನ್ನು ವಾಮಪಂಥ-ಮುಕ್ತ-ಭಾರತ ಎಂದೂ ಹೇಳಬಹುದು” ಎನ್ನುವ ಮೂಲಕ ಗರ್ವ ಪ್ರದರ್ಶನ ಮಾಡಿದರು. (ಎನ್‍ಬಿ)

Leave a Reply

comments

Related Articles

error: