
ಮೈಸೂರು
ಬೈಪಾಸ್ ರಸ್ತೆ ಕಾಮಗಾರಿಗೆ 150ಕೋ.ರೂ. ಹಣ ಬಿಡುಗಡೆಯಾಗಿದೆ : ಜಯಣ್ಣ
ಯಳಂದೂರು ಪಟ್ಟಣದ ಬೈಪಾಸ್ ರಸ್ತೆ ಕಾಮಗಾರಿಗೆ 150ಕೋಟಿರೂ. ಹಣ ಬಿಡುಗಡೆಯಾಗಿದೆ ಎಂದು ಶಾಸಕ ಜಯಣ್ಣ ತಿಳಿಸಿದರು.
ಯಳಂದೂರು ಪಟ್ಟಣದಲ್ಲಿ ನಿರ್ಮಾಣಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಶಾಸಕ ಜಯಣ್ಣ ಯಳಂದೂರು ಪಟ್ಟಣದ ಮೂಲಕ ಬಿಳಿಗಿರಿರಂಗನಬೆಟ್ಟ ಹಾಗೂ ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಹಾದು ಹೋಗಲಿದೆ ಎಂದರು. ಕೊಳ್ಳೇಗಾಲ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಒಂದೆಡೆ ರಾಷ್ಟ್ರೀಯ ಹೆದ್ದಾರಿ 209ರ ಲಿಂಕ್ ರಸ್ತೆ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ 1400ಕೋಟಿ ರೂ.ಹಣ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಇದರೊಂದಿಗೆ ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯಿಂದ ರಾಜ್ಯ ಹೆದ್ದಾರಿ 57ನ್ನು ಬೈಪಾಸ್ ರಸ್ತೆಯಾಗಿ ಅಭಿವೃದ್ಧಿ ಮಾಡಲು 150ಕೋಟಿರೂ.ಹಣವೂ ಕೂಡ ಬಿಡುಗಡೆಯಾಗಿತ್ತು. ರಸ್ತೆ ಅಭಿವೃದ್ಧಿಯಾಗುವುದರಿಂದ ವಾಣಿಜ್ಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಜೊತೆಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಪಟ್ಟಣದ ಳಚರಂಡಿಗೆ 40ಕೋಟಿರೂ. ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಮನೆಕಳೆದುಕೊಂಡ ಬಡ ಕುಟುಂಬಗಳಿಗೆ ಖಾಲಿ ನಿವೇಶನ ನೀಡಲೂ ಕ್ರಮ ವಹಿಸಲಾಗಿದೆ. ಅಂಬೇಡ್ಕರ್ ಸಮುದಾಯ ಭವನದ ಮೊದಲನೇ ಮಹಡಿಯ ಮೇಲ್ಛಾವಣಿ ಕಾಮಗಾರಿಗೆ 70ಲಕ್ಷರೂ. ಬಿಡುಗಡೆಯಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಜೆ.ಯೋಗೇಶ್, ತಾ.ಪಂ.ಅಧ್ಯಕ್ಷ ನಂಜುಂಡಯ್ಯ, ಅಂಬೇಡ್ಕರ್ ಸೇವಾ ಸಮಿತಿ ತಾಲೂಕಾಧ್ಯಕ್ಷ ರೇವಣ್ಣ ಮತ್ತಿತರರು ಶಾಸಕರ ಜೊತೆಗಿದ್ದರು.