ಮೈಸೂರು

ಪೌರಕಾರ್ಮಿಕರ ಬಗ್ಗೆ ಅಧಿಕಾರಿಗಳಲ್ಲಿ ವಿರೋಧಿ ನೀತಿ : ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯ

ಮೈಸೂರು,ಮಾ.5 : ರಾಜ್ಯದಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಅವರ ಖಾತೆಗೇ ನೇರವಾಗಿ ವೇತನ ಪಾವತಿಸಬೇಕೆಂಬ ಆದೇಶ ಹೊರ ಬಿದ್ದು ಹಲವಾರು ತಿಂಗಳು ಕಳೆದರೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘ ಒತ್ತಾಯಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್. ಮಾರ, ಖಾಯಮಾತಿ ಆದೇಶ ಹೊರಡಿಸಿ ನಾಲ್ಕು ತಿಂಗಳು ಕಳೆದರೂ ಸಂಬಂಧಿತ ಅಧಿಕಾರಿಗಳು ಅದರ ಜಾರಿಗೆ ಕ್ರಮ ಕೈಗೊಂಡಿಲ್ಲ. ಅಲ್ಲದೆ, ವೇತನವನ್ನು ಪೌರ ಕಾರ್ಮಿಕರ ಖಾತೆಗೆ ನೇರ ಪಾವತಿ ಮಾಡಬೇಕೆಂಬ ಆದೇಶವಿದ್ದರೂ ನಿರ್ಲಕ್ಷಿಸುತ್ತಿದ್ದಾರೆಂದು ದೂರಿದರು.

ಇದೇ ವೇಳೆ ಸರಾಸರಿ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಈಗ ಕ್ರಮ ಕೈಗೊಂಡಿದ್ದು, ಇದರಿಂದಾಗಿ ನೂರಾರು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ನೇಮಕ ಮಾಡಿಕೊಳ್ಳುವ ಬದಲು ಈಗ ಕಡಿತಕ್ಕೆ ಮುಂದಾಗಿರುವುದು ಸರಿಯಲ್ಲ. ಹೀಗಾಗಿ ಇರುವ ಸಂಖ್ಯೆಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದರು.

ಜೊತೆಗೆ, ಯುಜಿಡಿ ಕಾರ್ಮಿಕರನ್ನು ಪೌರ ಕಾರ್ಮಿಕರ ಪಟ್ಟಿಗೆ ಸೇರ್ಪಡೆ ಮಾಡದೇ ಕೇವಲ ಸ್ವಚ್ಛತಾ ಕಾರ್ಮಿಕರೆಂದು ಪರಿಗಣಿಸುವುದು ಸರಿಯಲ್ಲ. ಆದ್ದರಿಂದ ಇವರನ್ನು ಸಹಾ ಪೌರ ಕಾರ್ಮಿಕರೆಂದು ಪರಿಗಣಿಸಬೇಕು.

ಜೊತೆಗೆ, ಸ್ವಚ್ಛತೆ ಕೆಲಸದಲ್ಲಿ ನಿರತರಾಗಿರುವ ಲೋಡರ್ಸ್, ಕ್ಲೀನರ್ಸ್, ಮೇಸ್ತ್ರಿಗಳನ್ನು ಸಹಾ ಪೌರ ಕಾರ್ಮಿಕರೆಂದು ಪರಿಗಣಿಸಬೇಕು. ಅಲ್ಲದೆ ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ನೇಮಕಾತಿ ಅದಿಸೂಚನೆಯಲ್ಲಿ ರೋಸ್ಟರ್ ಪದ್ಧತಿ ರದ್ದುಪಡಿಸಿ ಕೇವಲ ಪೌರ ಕಾರ್ಮಿಕರನ್ನು ಮಾತ್ರ ಆ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಪೌರಕಾರ್ಮಿಕರಿಗೆ ಬಂದೊದಗಿರುವ ಸಂಕಷ್ಟವನ್ನು ಸಿಎಂ ಸಿದ್ದರಾಮಯ್ಯನವರಲ್ಲಿ ಅರಿವು ಮೂಡಿಸಿ ಪರಿಹಾರಕ್ಕೆ ಒತ್ತಾಯಿಸಿಲಾಗುವುದು ಎಂದರು.

ಪದಾಧಿಕಾರಿಗಳಾದ ಆರ್. ಶಿವಣ್ಣ, ಮಂಚಯ್ಯ, ಎನ್. ನರಸಿಂಹ, ಶ್ರೀನಿವಾಸ್, ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: