ಪ್ರಮುಖ ಸುದ್ದಿಮೈಸೂರು

ಬಿಜೆಪಿಯಿಂದ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶ ನ.27ರಂದು

ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷಕ್ಕೆ ವಿಶೇಷ ಚೈತನ್ಯ ದೊರೆತಿದ್ದು ಅವರು ಚಟುವಟಿಕೆಯಿಂದ ರಾಜ್ಯಾದ್ಯಂತ ಸಂಚರಿಸಿ ಹಲವಾರು ಸಮಾವೇಶಗಳನ್ನು ನಡೆಸಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ “ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶ” ವನ್ನು ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಹಾಗೂ ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕೋಟೆ ಶಿವಣ್ಣ ತಿಳಿಸಿದರು.
ಅವರು, ಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.27ರ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು ಸಮಾವೇಶದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯದ ಹಾಗೂ ರಾಷ್ಟ್ರದ ಮುಖಂಡರು ಭಾಗವಹಿಸುವರು.

ಸಾಮಾನ್ಯರನ್ನು ಸೆಳೆಯುತ್ತಿರುವ ಬಿಜೆಪಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತಿರುವ ಜನರು ಬಿಜೆಪಿ ಕಡೆ ಒಲವು ತೋರುತ್ತಿದ್ದು, ಪಕ್ಷವನ್ನು ಬೆಂಬಲಿಸಲು ಮೈಸೂರು ಗ್ರಾಮಾಂತರ ಪ್ರದೇಶದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಉತ್ಸುಕರಾಗಿದ್ದು ರಾಜ್ಯಾದ್ಯಂತ ಮೂರು ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಸೇರುವ ನಿರೀಕ್ಷೆಯಿದೆ. ಪೂರ್ವಭಾವಿ ಸಭೆಯ ನಿರ್ಧಾರದಂತೆ ಮೈಸೂರು ಜಿಲ್ಲೆಯಿಂದಲೇ ಐವತ್ತು ಬಸ್‍ಗಳು ಹಾಗೂ ಸ್ವಂತ ವಾಹನಗಳ ಮೂಲಕ ಸುಮಾರು ಹತ್ತು ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಿಂದಲೇ ಅತಿ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವರು. ಅಂದು ಬೆಳಗ್ಗೆ 7 ಗಂಟೆಗೆ ನಗರದ ಹೊರವಲಯದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯಿಂದ ಬಸ್ಸುಗಳು ಹೊರಡಲಿವೆ. ಪ್ರಧಾನಿ ನರೇಂದ್ರ ಮೋದಿಯವರ ನಿಷ್ಕಂಳಕ ಹಾಗೂ ನಿಸ್ವಾರ್ಥ ಆಡಳಿತಕ್ಕೆ ದೇಶವಾಸಿಗಳು ಅದ್ಭುತ ಜನಮನ್ನಣೆಯನ್ನು ನೀಡಿದ್ದು ಅಧಿಕ ಸಂಖ್ಯೆಯ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ, ಹಿಂದುಳಿದ ವರ್ಗಗಳೆಂದರೆ ಕೇವಲ ಮತಬ್ಯಾಂಕ್ ಎಂದು ಪರಿಗಣಿಸಿರುವ ಪಕ್ಷಗಳಿಗೆ ಸಮಾವೇಶದಿಂದ ಖಡಕ್ ಉತ್ತರ ನೀಡಲಿದ್ದು, ಅಹಿಂದಾ ಮೂಲಕ ಹಿಂದುಳಿದ ವರ್ಗಗದವರಿಗೆ ಮಂಕುಬೂದಿ ಎರಚಿದವರಿಗೆ ಮುಂದಿದೆ ಮಾರಿಹಬ್ಬ. ಮೈಸೂರಿನ  ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳ ಐದು ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಮೈಸೂರಿನ ಎಂಟು ವಿಧಾನಸಭಾ ಕ್ಷೇತ್ರದಿಂದ ಒಟ್ಟು ನೂರು ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು ಸಮಾವೇಶವು ಶಕ್ತಿಪ್ರದರ್ಶನವಾಗಿದ್ದು ಮುಂಬರುವ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು..
ಬಂದ್‍ಗೆ ಬೆಂಬಲ ಬೇಡ: ನೋಟು ಅಮಾನ್ಯಕ್ಕೆ ವಿರೋಧ ಪಕ್ಷಗಳು ಬೆಂಬಲಿಸದೆ ವಿರೋಧ ವ್ಯಕ್ತಪಡಿಸಿ ನ.28ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು ಇದಕ್ಕೆ ಸಾರ್ವಜನಿಕರು ಮನ್ನಣೆ ನೀಡಬಾರದು. ಇನ್ನೂ ಒಂದು ಗಂಟೆ ಹೆಚ್ಚಾಗಿ ಕರ್ತವ್ಯ ನಿರ್ವಹಿಸಿ ಕಾಳಧನಿಕರ ಪರವಾಗಿರುವವರಿಗೆ ಪ್ರಬಲ ಉತ್ತರ ನೀಡಿ. ಪ್ರಧಾನಿ ಮೋದಿಗೆ ಉತ್ತಮ ಸಾಮಾಜಿಕ ಸುಧಾರಣಾ ಕಾರ್ಯಗಳಿಗೆ ನಿಮ್ಮ ಜೊತೆ ನಾವಿದ್ದೇವೆ ಎಂದು ಕೈಜೋಡಿಸಿ ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘು ಕೌಟಿಲ್ಯ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಂಜುನಾಥ್, ವೆಂಕಟ ಶೆಟ್ಟಿ ಉಪಸ್ಥಿತರಿದ್ದರು.

Leave a Reply

comments

Related Articles

error: