ಮೈಸೂರು

ಎಫ್ ಆರ್ ಪಿ ದರ ಏರಿಸಿ : ರಾಜ್ಯ ರೈತ ಸಂಘದ ಒತ್ತಾಯ

ಕಬ್ಬು ಬೆಳೆದ ರೈತರಿಗೆ ಇಳುವರಿ ಕಡಿಮೆಯಾಗಿದ್ದು, ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಇದರಿಂದ ರಾಜ್ಯದಲ್ಲಿ ಶೇ.40ರಷ್ಟು ಕಬ್ಬಿನ ಉತ್ಪಾದನೆ ಕಡಿಮೆಯಾಗಿ ಸಕ್ಕರೆ ಉತ್ಪಾದನೆಯು ಕುಂಠಿತಗೊಂಡಿದೆ. ಬಣ್ಣಾರಿ ಕಾರ್ಖಾನೆ ಕಬ್ಬಿನ ಎಫ್.ಆರ್.ಪಿ ದರವನ್ನು  ಏರಿಸಬೇಕೆಂದು  ಒತ್ತಾಯಿಸಿ  ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ  ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ 2015-16ನೇ ಸಾಲಿನಲ್ಲಿ ಪಕ್ಕದ ಜಿಲ್ಲೆಯಿಂದ 8-10ತಿಂಗಳ ಅವಧಿಯ ಕಬ್ಬು ತಂದು ನುರಿಸಿದ ಕಾರಣ ಸಕ್ಕರೆ ಇಳುವರಿ ಕಡಿಮೆಯಾಗಿದೆ ಎಂದು ತೋರಿಸುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ರೈತರಿಗೆ ಕಬ್ಬಿನ ಎಫ್ ಆರ್ ಪಿ ದರ ಟನ್ನಿಗೆ 100 ರೂ.ಕಡಿಮೆಯಾಗಲು ಕಾರಣವಾಗಿದೆ ಎಂದರು.

ಕಳೆದ ವರ್ಷ ಸಕ್ಕರೆ ಬೆಲೆ ಕ್ವಿಂಟಾಲ್ ಗೆ 2800ರೂ.ಇತ್ತು. ರೈತರಿಗೆ ರೈತರಿಗೆ ಪ್ರತಿಟನ್ನಿಗೆ 2469ರೂ. ಪಾವತಿಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಬೆಲೆ 4000ರೂ. ಏರಿಕೆಯಾಗಿದೆ. ಆದರೆ ಬಣ್ಣಾರಿ ಕಾರ್ಖಾನೆಯವರು ಈ ವರ್ಷ 2300ರೂ.ಮಾತ್ರ ಪಾವತಿಸುತ್ತಿದ್ದಾರೆ. ಇದು ರೈತರಿಗೆ ತುಂಬಾ ನಷ್ಟವನ್ನುಂಟು ಮಾಡುತ್ತಿದೆ ಎಂದರು. ರೈತರಿಗೆ ಲಾಭ ಹಂಚಿಕೆ ಮಾಡದೇ ಕಾರ್ಖಾನೆಯವರು ರೈತರನ್ನು ವಂಚಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಸಕ್ಕರೆ ಸಚಿವರು ಬಾಗಲಕೋಟೆ, ಬಿಜಾಪುರ, ಬೆಳಗಾವಿ ಜಿಲ್ಲೆಗಳ ಕಬ್ಬುದರವನ್ನು ಎಫ್ ಆರ್ ಪಿ ದರಕ್ಕೆ ಹೆಚ್ಚುವರಿಯಾಗಿ ಟನ್ನಿಗೆ 300 ರೂ ನೀಡಬೇಕೆಂದು ಸೂಚಿಸಿದ್ದಾರೆ. ಅದರಂತೆ ಬಣ್ಣಾರಿ ಕಾರ್ಖಾನೆ ವ್ಯಾಪ್ತಿಯ  ರೈತರಿಗೂ ಎಫ್ ಆರ್ ಪಿ ದರಕ್ಕೆ ಹೆಚ್ಚುವರಿಯಾಗಿ ಮೊದಲ ಕಂತು 500ರೂ.ಸೇರಿಸಿ ಪಾವತಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು. ಈ ಕೂಡಲೇ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಒಂದು ವಾರದ ನಂತರ ನಿರಂತರ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ದೇವರಾಜ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Leave a Reply

comments

Related Articles

error: