ಕರ್ನಾಟಕಮೈಸೂರು

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸಹಕರಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಬಿ. ರಾಮು ಮನವಿ

ಯಳಂದೂರು: ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಯಳಂದೂರು ಪಟ್ಟಣದ ಸರಪಳಿ 322.800 ಕಿ.ಮಿ. ನಿಂದ 325.400 ಕಿ.ಮಿ ಪರಿಮಿತಿಯ ನಾಲ್ಕುಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವುದರಿಂದ ಇದಕ್ಕೆ ಅಕ್ಕಪಕ್ಕದ ನಿವಾಸಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿದರು.

ಅವರು ಈ ಬಗ್ಗೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ಅರಣ್ಯ ಕಚೇರಿಯಿಂದ ಪೆಟ್ರೋಲ್ ಬಂಕ್ ವರೆಗಿನ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು 14.64 ಕೋಟಿ ಹಣ ಬಿಡುಗಡೆಯಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಆರಂಭಗೊಳ್ಳಲಿದೆ. ಈ ರಸ್ತೆಗಾಗಿ ಅಕ್ಕಪಕ್ಕದಲ್ಲಿರುವ ಮನೆಗಳನ್ನು ತೆರವುಗೊಳಿಸಲು ಈಗಾಗಲೇ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಗಳು ಇದಕ್ಕೆ ಸಹಕರಿಸಬೇಕು. ಬಕರೀದ್ ಹಬ್ಬದ ನಂತರ ತೆರವು ಕಾರ್ಯ ಆರಂಭಿಸಲಾಗುವುದು.  ಇಲ್ಲಿ ಬಡವರ್ಗದವರೇ ಅಧಿಕ ಸಂಖ್ಯೆಯಲ್ಲಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಇವರಿಗೆ ಖಾಲಿ ನಿವೇಶನ ನೀಡಲು ಮತ್ತು ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೀಡುವ ಸಹಾಯಧನವನ್ನು ನೀಡಲು ಜಿಲ್ಲಾಡಳಿತವ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಪಟ್ಟಣದಲ್ಲಿ 5 ಎಕರೆ ವರೆಗೆ ಜಾಗ ಖರೀದಿಸಿ ಇಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಬಡವರಿಗೆ ನೀಡಲು ಕ್ರಮ ವಹಿಸಲಾಗುವುದು ಈ ಬಗ್ಗೆ ಕಂದಾಯ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆದಷ್ಟು ಬೇಗ ವರದಿ ನೀಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಕೆಲ ಸಾರ್ವಜನಿಕರು ಹೆದ್ದಾರಿ ಬೈಪಾಸ್ ರಸ್ತೆಯಾಗಿರುವುದರಿಂದ ರಸ್ತೆ ಅಗಲೀಕರಣ ಮಾಡಬಾರದು, ಬಡವರೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ಇದರಿಂದ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ನಿರ್ದೇಶನ ಇರುವುದರಿಂದ ಇದು ಸಾಧ್ಯವಾಗುವುದಿಲ್ಲ. ಆದರೆ ನಿವೇಶನ ಕಳೆದುಕೊಳ್ಳುವ ನಾಗರೀಕರು ಹಾಗೂ ಬಡವರಿಗೆ ಪರವಾಗಿ ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದರು.

ತಹಶೀಲ್ದಾರ್ ಕೆ. ಚಂದ್ರಮೌಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಉಮಾಶಂಕರ್, ರಾಷ್ಟ್ರೀಯ ಹೆದ್ದಾರಿಯ ಕಾರ್ಯಪಾಲಕ ಅಭಿಯಂತರ ಕಾಂತರಾಜು ಇದ್ದರು.

Leave a Reply

comments

Related Articles

error: