ಮೈಸೂರು

ತಾಯೂರು ಪ್ರಕಾಶ್ ಸ್ವಾರ್ಥ ನಡೆಗೆ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

ಮೈಸೂರು,ಮಾ.7:- ವರುಣಾ ವಿಧಾನ ಸಭಾ ಕ್ಷೇತ್ರದ  ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್ ಸ್ವಾರ್ಥ ನಡೆಯನ್ನು ಖಂಡಿಸಿ ಹಾಗೂ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಅಭ್ಯರ್ಥಿ ಎಂ.ಎಂ.ಅಭಿಷೇಕ್ ವಿರುದ್ದ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ತೀ.ನರಸೀಪುರ ಪಟ್ಟಣದ ಆದಿಚುಂಚನಗಿರಿ ಸಮುದಾಯಭವನದಲ್ಲಿ ಕರೆಯಲಾಗಿದ್ದ ವಿಕಾಸಪರ್ವ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ನಡೆಯಿತು.

ಇದೇ ತಿಂಗಳ 09 ರಂದು ವರುಣಾ ವಿಧಾನ ಸಭಾ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ವಿಕಾಸಪರ್ವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅದರ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿ ಅಭಿಷೇಕ್ ವಿರುದ್ಧ ಗುಡುಗಿದ ಕಾರ್ಯಕರ್ತರು,ಕ್ಷೇತ್ರಾಧ್ಯಕ್ಷರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಹಿಂಬಾಲಕರಿಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು, ಯಾವುದೇ ಸಭೆ ಸಮಾರಂಭದ ಕುರಿತು ನಮಗೆ ಮಾಹಿತಿ ನೀಡುತ್ತಿಲ್ಲ. ಅಭ್ಯರ್ಥಿ ಅಭಿಷೇಕ್ ಕೂಡ ಕಾರ್ಯಕರ್ತರನ್ನು ಒಗ್ಗೂಡಿಸಿ ವಿಶ್ವಾಶಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಕಾರ್ಯಕರ್ತರು ಕರೆ ಮಾಡಿದರೂ ಸ್ವೀಕರಿಸದೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಇವರುಗಳು ಈ ನಡೆಯಿಂದ ಪಕ್ಷ ಸಂಘಟನೆ ಮಾಡುವುದು ಬಹಳ ಕಷ್ಟಕರವಾಗಿದೆ‌.

ಹೀಗಾದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಹೇಗೆ ಎಂದು ಸಭೆಯಲ್ಲಿ ಅಧ್ಯಕ್ಷರು ಹಾಗೂ ಅಭ್ಯರ್ಥಿ ವಿರುದ್ದ ಹರಿಹಾಯ್ದರು. ಇದರಿಂದ ಕೆಲ ಕಾಲ ಸಭೆ ಗೊಂದಲದ ಗೂಡಾಗಿದ್ದು, ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಯಿತು.

ಈ ಮಧ್ಯ ಮಾತನಾಡಿದ ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ, ಈ ಕುರಿತು ಮಾ.9 ರಂದು ವಿಕಾಸ ಪರ್ವ ಕಾರ್ಯಕ್ರಮ ಮುಗಿದ ನಂತರ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆ ಬಹೆಹರಿಸೋಣ ಅಲ್ಲಿಯವರೆಗೆ ನೀವು ಸುಮ್ಮನಿದ್ದು, ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಅಭಿಷೇಕ್ ಮಾತನಾಡಿ , ಈಗಾಗಿರುವ ತಪ್ಪು ಮತ್ತೆ ಇನ್ನೆಂದೂ ಆಗದಂತೆ ನೋಡಿಕೊಳ್ಳಲಾಗುವುದು. ಹಾಗಾಗಿ ತಾವು ತಪ್ಪನ್ನು ಮನ್ನಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುಂತೆ ಮನವಿ ಮಾಡಿದರು.

ಕಾರ್ಯಾಧ್ಯಕ್ಷ ಸತೀಶ್, ರಮೇಶ್, ತಾ.ಪಂ ಸದಸ್ಯ ಸಾಜಿದ್ ಅಹಮ್ಮದ್, ಪುಷ್ಪ ಪ್ರಭುಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ, ಕಾಮಹಳ್ಳಿ ಸುರೇಶ್ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: