
ಮೈಸೂರು
ಪೂಜೆಯ ನೆಪದಲ್ಲಿ ಮಹಿಳೆಯೋರ್ವರಿಗೆ 1.5ಲಕ್ಷರೂ.ಮೌಲ್ಯದ ಚಿನ್ನಾಭರಣ ವಂಚನೆ
ಮೈಸೂರು,ಮಾ.8:- ಸಂಪತ್ತು ಮತ್ತು ಆರೋಗ್ಯವೃದ್ಧಿಗೆ ಅಪರಿಚಿತನೋರ್ವ ಪೂಜೆಯ ನೆಪದಲ್ಲಿ ಮಹಿಳೆಯೋರ್ವರಿಗೆ 1.5ಲಕ್ಷರೂ.ಮೌಲ್ಯದ ಚಿನ್ನಾಭರಣ ವಂಚಿಸಿದ ಪ್ರಕರಣ ಹೂಟಗಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಾ.5ರಂದು ಮಧ್ಯಾಹ್ನ ಹೂಟಗಳ್ಳಿ ಪಟೇಲ್ ನಾಗೇಗೌಡ ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿನ ನಿವಾಸಿ ಎ.ಎನ್.ಅನಂತಕುಮಾರ್ ಪತ್ನಿ ಅನ್ನಪೂರ್ಣಮ್ಮ ಅವರ ಮನೆಗೆ ಮಧ್ಯಾಹ್ನ 12ರ ವೇಳೆ ಬಂದ ಅಪರಿಚಿತ ವ್ಯಕ್ತಿ ಮನೆಯ ಏಳ್ಗೆಗಾಗಿ ಪೂಜೆ ಮಾಡಿಕೊಡುತ್ತೇನೆ ಎಂದು ಅವರ ಕತ್ತಿನಲ್ಲಿದ್ದ40ಗ್ರಾಮ ತೂಕದ ಮಾಂಗಲ್ಯ ಸರ, 6ಗ್ರಾಂ ತಾಳಿ, 4ಗ್ರಾಂ ಗುಂಡುಹೊಂದಿದ್ದ ಚಿನ್ನದ ಸರವನ್ನು ಕುಡಿಕೆಯೊಂದಕ್ಕೆ ಹಾಕಿಸಿ, ಮನೆಯ ಬಾಗಿಲು ಹಾಕಿ ಅವರನ್ನು ಹಾಲ್ ನಲ್ಲಿ ಕುಳ್ಳಿರಿಸಿ ಮೂಜೆ ಮಾಡಿದ. ಕುಡಿಕೆ ಸುತ್ತಲೂ ದಾರ ಬಿಗಿದು ಅರ್ಧಗಂಟೆಯ ನಂತರ ಈ ಕುಡಿಕೆ ಬಿಚ್ಚಿ ಮಾಂಗಲ್ಯ ಸರ ಧರಿಸಿಕೊಳ್ಳಿ ಎಂದು ಹೇಳಿ ಹೊರಟುಹೋಗಿದ್ದಾನೆ. ಅರ್ಧಗಂಟೆ ಬಳಿಕ ಕುಡಿಕೆ ಬಿಚ್ಚಿ ನೋಡಿದಾಗ ಅದರಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಅಕ್ಕಿ ಮಾತ್ರ ಉಳಿದಿತ್ತು. ಪತಿ ಅನಂತಕುಮಾರ್ ಶಾಲೆಗೆ ಮಕ್ಕಳನ್ನು ಬಿಟ್ಟು ಮನೆಗೆ ಮರಳಿದ ನಂತರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆತನನ್ನು ಹುಡುಕಿದರೂ ಎಲ್ಲಿಯೂ ಕಾಣ ಸಿಗಲಿಲ್ಲ. ಅವನು ವಂಚಿಸಿ ಚಿನ್ನಾಭರಣ ದೋಚಿರುವುದು ಖಾತ್ರಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹೇರ್ ಪಿನ್,ತಲೆಕೂದಲು ಎಂದು ಕೂಗುತ್ತ ಬರುವ ಮಹಿಳೆಯೋರ್ವರು ಹೂಟಗಳ್ಳಿ ಬಂಗಾರಪೇಟೆಯಿಂದ ಮಂತ್ರಗಾರರೊಬ್ಬರು ಬರುತ್ತಾರೆ. ಅವರ ಬಳಿ ಪೂಜೆ ಮಾಡಿಸಿಕೊಳ್ಳಿ ಮತ್ತೆ ಅವರು ಸಿಗುವುದಿಲ್ಲ ಎಂದು ಅಲ್ಲಿನ ಮಹಿಳೆಯರಿಗೆ ಹೇಳಿ ಹೋಗಿದ್ದಳು ಎಂದು ಸ್ಥಳೀಯ ಮಹಿಳೆಯರು ಹೇಳುತ್ತಿದ್ದಾರೆ. ತಂಡವೊಂದು ಇಂತಹ ದುಷ್ಕೃತ್ಯ ನಡೆಸುವಲ್ಲಿ ಸಕ್ರಿಯವಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಇದೀಗ ಪೊಲೀಸರು ಆರೋಪಿಗಳು ಹಿಡಿಯಲು ಬಲೆ ಬೀಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)