ಕರ್ನಾಟಕಪ್ರಮುಖ ಸುದ್ದಿ

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಶತಮಾನೋತ್ಸವಕ್ಕೆ 25 ಕೋಟಿ ರೂ: ಮುಖ್ಯಮಂತ್ರಿ

ಬೆಂಗಳೂರು (ಮಾ.8): ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ 25 ಕೋಟಿ ರೂ. ಗಳ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಯೂನಿವರ್ಸಿಟಿ ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಕಾಲೇಜು ಕಟ್ಟಡಗಳ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 100 ವರ್ಷ ತುಂಬಿರುವ ವಿಶ್ವ ವಿದ್ಯಾಲಯ ಬಹಳಷ್ಟು ಮಂದಿ ಇಂಜೀನಿಯರುಗಳು, ವಿಜ್ಞಾನಿಗಳು, ಮತ್ತು ಸಂಶೋಧರನ್ನ ದೇಶಕ್ಕೆ ಕೊಡುಗೆಯನ್ನಾಗಿ ನೀಡಿದೆ ಎಂದ ಅವರು, ಇಂದು ಅವರುಗಳು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಸಾಧನೆಗೈದಿದ್ದಾರೆ. ಅವರುಗಳಂತೆಯೇ ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮುವಂತೆ ಕರೆ ನೀಡಿದರು.

ಒಂದು ಶಿಕ್ಷಣ ಸಂಸ್ಥೆಗೆ 100 ವರ್ಷ ಮಹತ್ತರ ಘಟ್ಟವಾಗಿದ್ದು, ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಎಂದು ಕರೆ ನೀಡಿದ ಅವರು ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಿರುವ, ಅವರೇ ಕಟ್ಟಿಸಿರುವ ಕಾಲೇಜಿನಲ್ಲಿ ಓದುತ್ತಿರುವ ಇಂದಿನ ವಿದ್ಯಾರ್ಥಿಗಳು ಸರ್.ಎಂ.ವಿ. ಅವರ ಮಟ್ಟಕ್ಕೆ ಹೋಗಲು ಪ್ರಯತ್ನಪಡಬೇಕು ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಶಿಕ್ಷಣ, ಉಚಿತ ಬಸ್‍ಪಾಸ್, ಉಚಿತ ಲ್ಯಾಪ್‍ಟಾಪ್ ಮುಂತಾದ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದು ಅವರು ಆಶಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಉಪಸ್ಥಿತರಿದ್ದರು. (ಎನ್‍.ಬಿ)

Leave a Reply

comments

Related Articles

error: