ಕರ್ನಾಟಕಪ್ರಮುಖ ಸುದ್ದಿ

ಚಲನಚಿತ್ರ ನೀತಿನಿರೂಪಣಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ

ಫಿಲ್ಮ್ ಇನ್‍ಸ್ಟಿಟ್ಯೂಟ್ ಸ್ಥಾಪನೆ, ಮಲ್ಟಿಪ್ಲೆಕ್ಸ್ ಟಿಕೆಟ್ ದರ ನಿಗದಿ ಸೇರಿದಂತೆ ಹತ್ತು ಹಲವು ಸುಧಾರಣಾ ಕ್ರಮ ಶಿಫಾರಸು

ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ನಿಬಂಧನೆಯೊಂದಿಗೆ ನಿರ್ಮಿಸುವ ಜನತಾಚಿತ್ರಮಂದಿಗಳಿಗೆ ವಿಶೇಷ ಸಹಾಯಧನ, ಕಲಾವಿದರಿಗೆ ವಿಶೇಷ ಸವಲತ್ತುಗಳು ಹಾಗೂ ಮಲ್ಟಿಪ್ಲೆಕ್ಸ್ಗಳ ಪ್ರವೇಶ ದರ ನಿಗದಿ, ಪ್ರೈಮ್ ಟೈಮ್‍ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಸೇರಿದಂತೆ ಹಲವಾರು ಶಿಫಾರಸುಗಳನ್ನು ಚಲನಚಿತ್ರ ನೀತಿ ನಿರೂಪಣಾ ಸಮಿತಿ ಸರ್ಕಾರಕ್ಕೆ ವರದಿ ಮಾಡಿದೆ. ಚಲನಚಿತ್ರ ಆಕಾಡೆಮಿಯೊಂದಿಗೆ ತಜ್ಞರ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದೆ.

ಶಿಫಾರಸ್ಸುಗಳು: ಜನತಾಚಿತ್ರಮಂದಿರಗಳ ನಿರ್ಮಾಣಕ್ಕೆ ತಲಾ 50 ಲಕ್ಷ ರೂ, ನವೀರಕಣಕ್ಕೆ 25 ಲಕ್ಷ ರೂ.ಗಳನ್ನು ನೀಡಬೇಕು. ಚಿತ್ರಮಂದಿರಗಳ ನಿಯಮಗಳನ್ನು ಸರಳಗೊಳಿಸುವುದು, ರಾಷ್ಟ್ರಮಟ್ಟದಲ್ಲಿ ಸ್ವರ್ಣಕಮಲ ಪ್ರಶಸ್ತಿ ಪಡೆದ ಕನ್ನಡ ಚಿತ್ರಕ್ಕೆ 25 ಲಕ್ಷ ರೂ, ರಜತ ಕಮಲ ಪ್ರಶಸ್ತಿ ಪಡೆದ ಚಿತ್ರಕ್ಕೆ 20 ಲಕ್ಷ ರೂ ಪ್ರೋತ್ಸಾಹ ಧನ ನೀಡಬೇಕು.

ಅದೇ ರೀತಿ ರಾಜ್ಯ ಸರ್ಕಾರಿ ಪ್ರಶಸ್ತಿ ಪಡೆದ ಚಿತ್ರಗಳಿಗೆ 20 ಲಕ್ಷ ರೂ, ಅತ್ಯುತ್ತಮ ಕಥೆ ಕಾದಂಬರಿ ಆಧರಿಸಿದ ಐದು ಚಿತ್ರಗಳಿಗೆ ತಲಾ 20 ಲಕ್ಷ ರೂಗಳನ್ನು ಹಾಗೂ ಗುಣಮಟ್ಟದ ಇತರೆ ಚಿತ್ರಗಳಿಗೆ 15 ಲಕ್ಷ ರೂಗಳ ಸಹಾಯಧನ ನೀಡಬೇಕು. ಜೀವಿತಾವಧಿ ಸಾಧನೆ ಮಾಡಿದ ಚಿತ್ರರಂಗದ ವಿವಿಧ ವಲಯದವರಿಗೆ ಎರಡು ಹೊಸ ಪ್ರಶಸ್ತಿ ಹಾಗೂ ಎರಡರಿಂದ ಮೂರು ಲಕ್ಷ ರೂ.ಗೆ ನಗದು ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಡವ, ಬಂಜಾರ, ಕೊಂಕಣಿ ಭಾಷೆಗಳ ಕಲಾವಿದರು ಸೇರಿದಂತೆ ತಜ್ಞರಿಗೂ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಬೇಕು.

ಕನ್ನಡ ಚಿತ್ರ ನಿರ್ಮಾಪಕರಿಗೆ ನೆರವಾಗುವ ನಿಟ್ಟಿನಲ್ಲಿ ಪರಭಾಷೆ ಚಿತ್ರಗಳಿಗೆ ಪ್ರದರ್ಶನ ತೆರಿಗೆ ಐದು ರೂ ಹೆಚ್ಚಿಸಿ ಬಂದ ಹಣವನ್ನು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಬಳಸಬೇಕು. ನಕಲು ತಡೆಗೆ ಗೂಂಡಾ ಕಾಯ್ದೆಯನ್ನು ಬಲಗೊಳಿಸಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಆನ್ ಲೈನ್ ಮುಖಾಂತರ ಟಿಕೆಟ್ ಕಾಯ್ದಿರಿಸುವಿಕೆ, ಚಲನಚಿತ್ರ ರಂಗದವರ ಶ್ರೇಯೋಭಿವೃದ್ಧಿಗಾಗಿ ಮೈಸೂರು ಚಿತ್ರನಗರಿ ಸಮೀಪ ವಸತಿ ಯೋಜನೆಗಾಗಿ 50 ಎಕರೆ ಜಮೀನು ಮೀಸಲಿಡಬೇಕು. ಅಗತ್ಯವಿದ್ದರೆ ಶೇ 50ಕ್ಕಿಂತಲೂ ಹೆಚ್ಚು ಭಾಗ ರಾಜ್ಯದಿಂದ  ಹೊರಗಡೆ ಚಿತ್ರೀಕರಣ ನಡೆಸಲು ಸರ್ಕಾರದ ಪೂರ್ವಾನುಮತಿ ಪಡೆದು ಚಿತ್ರೀಕರಿಸಲು ಅವಕಾಶ ನೀಡಬೇಕು.

ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಬೇಕು, ಶಾಲೆಗಳ ಪಠ್ಯಕ್ರಮದಲ್ಲಿ ಸಿನಿಮಾ ವಿಷಯ ಅಳವಡಿಸಿ ಪದವಿ ಮತ್ತು ಸ್ನಾತಕೋತ್ತರದವರೆಗೆ ಜಾರಿಗೊಳಿಸುವು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಫಿಲ್ಮ್ ಇನ್ಸ್ ಸ್ಟಿಟ್ಯೂಟ್ ಸ್ಥಾಪಿಸುವಂತೆ ಒತ್ತಾಯಿಸಿ ಸರಕಾರಕ್ಕೆ ನೀತಿ ನಿರೂಪಣಾ ಸಮಿತಿ ಶಿಫಾರಸು ಮಾಡಿದೆ.

Leave a Reply

comments

Tags

Related Articles

error: