ಮೈಸೂರು

ಗಿರಿಜನರ ಹಾಡಿಗೆ ಸೌಕರ್ಯವಿಲ್ಲ; ಕಾಡು ಪ್ರಾಣಿಗಳ ಭಯ ತಪ್ಪಿಲ್ಲ

ಬೈಲಕುಪ್ಪೆ: ಗಿರಿಜನ ಸೋಲಿಗರ ಹಾಡಿಗಳಲ್ಲಿ ಕನಿಷ್ಠ ಸೌಲಭ್ಯಗ ಕೊರತೆ ಇದ್ದು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳೂ ನಿರ್ಲಕ್ಷ್ಯವಹಿಸಿರುವುದರಿಂದ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ.

ತಾಲೂಕಿನ ಆಯರಬೀಡು ಗಿರಿಜನರ ಹಾಡಿಯ ಸೋಲಿಗ ಜನರಿಗೆ ಕನಿಷ್ಠ ಕುಡಿಯುವ ನೀರಿನ ಕೊರತೆಯಿಂದ ಬವಣೆ ಪಡುತ್ತಿದ್ದರೂ ಕೇಳುವವರೆ ಇಲ್ಲವಾಗಿದ್ದಾರೆ.

30 ಕುಟುಂಬಗಳು ವಾಸಿಸುತ್ತಿರುವ ಈ ಹಾಡಿಯಲ್ಲಿ 125 ಜನ ವಾಸ ಮಾಡುತ್ತಿದ್ದಾರೆ. ಕೇವಲ ಕೂಲಿಯನ್ನೆ ನಂಬಿ ಜೇವನ ಸಾಗಿಸುತ್ತಿರುವ ಇವರಿಗೆ ಕಳೆದ 35 ವರ್ಷಗಳ ಹಿಂದೆ ಲ್ಯಾಂಡ್ ಆರ್ಮಿ ವತಿಯಿಂದ ನಿರ್ಮಿಸಲಾಗಿದ್ದ ಮನೆಗಳು ಶಿಥಿಲಗೊಂಡಿವೆ. ಮಳೆ ಬಂದಾಗ ನೀರು ಸೋರುತ್ತಿರುವುದು ಮಾತ್ರವಲ್ಲದೆ ಸ್ವಲ್ಪ ದಿನಗಳಲ್ಲೇ ಕುಸಿಯಬಹುದೆನ್ನುವ ಹಂತ ತಲುಪಿವೆ.

ಮುತ್ತೂರು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಈ ಹಾಡಿಗೆ ಕುಡಿಯುವ ನೀರಿಗಾಗಿ ಕಳೆದ 15 ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಟ್ಯಾಂಕಿಗೆ ನೀರನ್ನೆ ತುಂಬದಿರುವುದರಿಂದ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಇರುವ ಒಂದು ಕೈಪಂಪ್ ಕೆಟ್ಟು ಹೋಗಿರುವುದರಿಂದ ಹೊಲದಲ್ಲಿ ತೋಡಿಸಲಾಗಿರುವ ಕೊಳವೆ ಬಾವಿ ಮೂಲಕ ರೈತರಿಂದ ನೀರು ಪಡೆದು ಕುಡಿಯುವ ಪರಿಸ್ಥಿತಿ ನಿರ್ಮಾವಾಗಿದೆ.

ಬರೀ ಕತ್ತಲು…

ಕಾಡಂಚಿನ ಹಾಡಿಯಾಗಿದ್ದರೂ ಸಹ ವಿದ್ಯುತ್ ದೀಪಗಳನ್ನು ಸರಿಯಾಗಿ ಅಳವಡಿಲ್ಲ. ಕಾಡು ಪ್ರಾಣಿಗಳ ನಿಯಂತ್ರಣಕ್ಕಾಗಿ ಕಂದಕ ತೋಡಲಾಗಿದ್ದರೂ ಸಹ ಆಗಾಗ ಕಾಡು ಪ್ರಾಣಿಗಳು ಅಡ್ಡಾಡುತ್ತಿರುತ್ತವೆ. ಹೀಗಾಗಿ ಕತ್ತಲಲ್ಲಿ ಓಡಾಡುವುದು ಸಾಹಸವೇ ಸರಿ.

ಪಂಚಾಯಿತಿಯಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಹಾಡಿ ಮುಖಂಡಾದ ನಟೇಶ್, ಮಸಣಯ್ಯ, ಕಾಳಮ್ಮ, ಸಿದ್ದಯ್ಯ, ಸುರೇಶ್ ಸೇರಿದಂತೆ ಹಲವಾರು ಆರೋಪಿಸುತ್ತಿದ್ದಾರೆ.

ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಯೋಜನೆಯಡಿಯಲ್ಲಿ ದೃಢೀಕರಿಸಿದ ಅನುದಾನದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಬುಡಕಟ್ಟು ಜನಂಗದವರಾದ ಸೋಲಿಗರಿಗೆ ತಲಾ 2 ಲಕ್ಷ ರು. ವೆಚ್ಚದಲ್ಲಿ ಜಯಾ, ಬೇಬಿ, ಚಂದ್ರಮ್ಮ, ನಾಗಮ್ಮ, ಪರಮೇಶ, ಮೀನಾಕ್ಷಿ, ಅನಿತಾ, ಪದ್ಮಾ, ಬೋಜಮ್ಮ, ಗಂಗಮ್ಮ, ಯೋಗೀಶ್, ಚಿಕ್ಕಮ್ಮ, ನಟೇಶ, ಮಸಣಯ್ಯ, ನಾಗಮ್ಮ, ಮಸಣಮ್ಮ ಸೇರಿದಂತೆ 14 ಮಂದಿಗೆ ಮನೆ ಮಂಜೂರು ಮಾಡಿಕೊಡಲಾಗಿದೆ.

ಆದರೆ, ಈ ಮನೆ ನಿರ್ಮಾಣದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿದ್ದು, ಅವರು ಕೆಲಸವನ್ನೇ ಆರಂಭಿಸಿಲ್ಲ. ಜಿಲ್ಲಾಡಳಿತ ಗಮನ ಹರಿಸಿ ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಬೇಕು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ವರದಿ: ಬಿ.ಆರ್. ರಾಜೇಶ್

aayara-beedu-2-new
ಹಾಡಿಯಲ್ಲಿ ಕೆಲವು ಮನೆಗಳ ಮೇಲ್ಛಾವಣಿಗಳು ಕುಸಿದುಬಿದ್ದಿದ್ದು, ಪುನರ್‍ ನಿರ್ಮಾಣ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ನೀರಿನ ಟ್ಯಾಂಕ್ ಇದ್ದರೂ ಅದರಲ್ಲಿ ನೀರು ತುಂಬಿಸುತ್ತಿಲ್ಲ.

Leave a Reply

comments

Related Articles

error: