ಮೈಸೂರು

ಕಾಂಗ್ರೆಸ್ ಸರ್ಕಾರ ದಲಿತರ ಉದ್ಧಾರದ ಹೆಸರಿನಲ್ಲಿ 2157.77 ಕೋಟಿ ರೂ.ಗಳ ಅವ್ಯವಹಾರ ಮಾಡಿದೆ : ಸಮೀಕ್ಷಾ ವರದಿ ಬಿಡುಗಡೆಗೊಳಿಸಿದ ಬಿಜೆಪಿ ಆರೋಪ

ಮೈಸೂರು,ಮಾ.9-ಎಸ್ಸಿ, ಎಸ್ಟಿ, ಓಬಿಸಿ ಹಾಸ್ಟೆಲ್ ಗಳು ನರಕದ ಕೂಪಗಳು ಎಂಬ ಸಮೀಕ್ಷಾ ವರದಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆಗೊಳಿಸಿದೆ. ರಾಜ್ಯಾದ್ಯಾಂತ ಈ ವರದಿಯ ಕೈಪಿಡಿಯನ್ನು ಇಂದು ಬಿಡುಗಡೆಗೊಳಿಸಲಾಗುತ್ತಿದ್ದು, ಅದರಂತೆ ನಗರದ ನಜರಾಬಾದ್ ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಬಿಜೆಪಿಯ ಸಮೀಕ್ಷಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಮೈಸೂರು ನಗರ ಬಿಜೆಪಿ, ಎಸ್ಸಿ ,ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾದ ಅಧ್ಯಕ್ಷ ವೀರಯ್ಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಭಾರತೀಯ ಜನತಾ ಪಾರ್ಟಿಯು ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಮಹಿಳಾ ಹಾಸ್ಟೆಲ್ ಗಳು ಮತ್ತು ವಸತಿ ಶಾಲೆಗಳ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಬಯಲಾದ ನರಕ ಸದೃಶ ಸಂಗತಿಗಳು ಕಾಂಗ್ರೆಸ್ ಸರ್ಕಾರವು ದಮನಿತರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಸರ್ಕಾರ ದಲಿತರ ಉದ್ಧಾರದ ಹೆಸರಿನಲ್ಲಿ 2157.77 ಕೋಟಿ ರೂ.ಗಳ ಅವ್ಯವಹಾರ ಮಾಡಿದೆ.

ಬಿಜೆಪಿಯ ಎಸ್ಸಿ, ಎಸ್ಟಿ, ಓಬಿಸಿ ಮೋರ್ಚಾ ತಂಡದ ಕಾರ್ಯಕರ್ತರು ರಾಜ್ಯದ ಎಲ್ಲ ಜಿಲ್ಲೆಗಳ ಒಟ್ಟು 1080 ಎಸ್ಸಿ, ಎಸ್ಟಿ ಹಾಗೂ 1510 ಓಬಿಸಿ ಹಾಸ್ಟೆಲ್ ಗಳನ್ನು ಖುದ್ದಾಗಿ ಸಂದರ್ಶಿಸಿ, ಸ್ಥಿತಿಗತಿಗಳನ್ನು ಪರಿಶೀಲಿಸಿ ಈ ಸಮಗ್ರ ವರದಿಯನ್ನು ರೂಪಿಸಿದ್ದಾರೆ. ಒಟ್ಟು 30 ದಿನಗಳ ಕಾಲ ನಡೆದ ಈ ಸಮೀಕ್ಷೆಯ ಮುಖ್ಯಾಂಶಗಳನ್ನು ಬಿಜೆಪಿಯು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.

ಸಮೀಕ್ಷೆಯಲ್ಲಿ ಕಂಡುಬಂದಂತೆ ಎಸ್ಸಿ, ಎಸ್ಟಿ ಮತ್ತು ಓಬಿಸಿ ಹಾಸ್ಟೆಲ್ ಗಳು ಸೇರಿದಂತೆ 377 ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳಿಲ್ಲ, 381 ಹಾಸ್ಟೆಲ್ ಗಳಲ್ಲಿ ಶೌಚಾಲಯಗಳು ಸರಿಯಿಲ್ಲ, 565 ಹಾಸ್ಟೆಲ್ ಗಳು ವಾಸಿಸಲು ಯೋಗ್ಯವಾಗಿಲ್ಲ, 331 ಹಾಸ್ಟೆಲ್ ಗಳಲ್ಲಿ ಉಗ್ರಾಣಗಳಿಲ್ಲ, 336 ಹಾಸ್ಟೆಲ್ ಗಳಲ್ಲಿ ಸ್ನಾನಗೃಹಗಳು ಸರಿಯಿಲ್ಲ, 1106 ಹಾಸ್ಟೆಲ್ ಗಳಲ್ಲಿ ಸ್ನಾನಕ್ಕೆ ಬಿಸಿನೀರಿಲ್ಲ, 498 ಹಾಸ್ಟೆಲ್ ಗಳಲ್ಲಿ ಕುಡಿಯುವ ನೀರಿಲ್ಲ, 666 ಹಾಸ್ಟೆಲ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವಾಸವಾಗಿದ್ದಾರೆ, 1183 ಹಾಸ್ಟೆಲ್ ಗಳಲ್ಲಿ ಮಂಚ-ದಿಂಬು ಹೊದಿಕೆಗಳಿಲ್ಲ ಎಂಬುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಕೈ ಪಿಡಿಯಲ್ಲಿ ನಮೂದಿಸಲಾಗಿದೆ.

ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಎಸ್ಸಿ ಮೋರ್ಚಾ ಮೈಸೂರು ನಗರಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿಗಳಾದ ಮುರುಳಿ, ಆನಂದ್ ರಾಜು, ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್, ನಂದಕುಮಾರ್, ಮಾಧ್ಯಮ ಪ್ರಮುಖ್ ಪ್ರಭಾಕರ್ ಶಿಂಧೆ, ಮೈಸೂರು ನಗರ ವಿಭಾಗ ಪ್ರಭಾರಿ ನಾಗೇಂದ್ರ, ಫಣೀಶ್, ಸತೀಶ್, ರಾಜೇಶ್, ಧನುಷ್, ಯುವ ಮೋರ್ಚಾ ಅಧ್ಯಕ್ಷರು ಗೋಕುಲ್ ಗೋವರ್ಧನ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕೃಷ್ಣಮೂರ್ತಿ, ಸುರೇಂದ್ರ, ಮುಖಂಡರಾದ ಗಿರಿಧರ್, ಲೋಹಿತ್ ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: