
ಮೈಸೂರು
ಅರ್ಥಶಾಸ್ತ್ರವನ್ನು ಸಮಾಜಪರ ವಿಷಯವಾಗಿ ನೋಡಿ : ದೇಶಪಾಂಡೆ
ಭ್ರಷ್ಟಾಚಾರ ತಡೆಯಬಹುದು ಎನ್ನುವ ದೃಷ್ಟಿಯಲ್ಲಿ 500 ಹಾಗೂ 1000 ರೂ.ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದು ಸಂತೋಷದ ವಿಷಯವಾದರೂ ಈ ಪ್ರಕ್ರಿಯೆಯಲ್ಲಿ ಸಿದ್ಧತೆಯ ಕೊರತೆ ಕಾಣಿಸುತ್ತಿದೆ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗ ಏರ್ಪಡಿಸಿದ್ದ ಯೋಜನಾ ವೇದಿಕೆ ಹಾಗೂ ಕೌಟಿಲ್ಯ ಆರ್ಥಿಕ ಚಿಂತನೆಗಳ ವೇದಿಕೆ ಉದ್ಘಾಟಿಸಿ ಪ್ರೊ.ಆರ್.ಎಸ್.ದೇಶಪಾಂಡೆ ಮಾತನಾಡಿದರು. ದೇಶದ ಆರ್ಥಿಕತೆ ಸುಧಾರಿಸಬೇಕಾದರೆ ಅರ್ಥಶಾಸ್ತ್ರವನ್ನು ಕೇವಲ ತಾಂತ್ರಿಕ ವಿಷಯವಾಗಿ ನೋಡಬಾರದು. ಸಮಾಜಪರವಾದ ವಿಷಯವಾಗಿ ಕಾಣಬೇಕು. ಜನರ ಹಿತಾಸಕ್ತಿ ಮೇಲೆ ಆರ್ಥಿಕತೆ ಕಾರ್ಯನಿರ್ವಹಿಸಿದರೆ ಮಾತ್ರ ದೇಶದ ಪ್ರಗತಿ ಕಾಣಬಹುದು ಎಂದರು.
ಕೌಟಿಲ್ಯನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕೌಟಿಲ್ಯ ಕೇವಲ ಅರ್ಥಶಾಸ್ತ್ರಜ್ಞನಲ್ಲ. ಆತ ಸಮಾಜವಾದಿಯೂ ಆಗಿದ್ದಾನೆ. ಕೌಟಿಲ್ಯನ ಸಮಾಜಪರ ಆಶಯ ಹಾಗೂ ಅಮರ್ಥ್ಯ ಸೇನ್ ಅವರ ತಾಂತ್ರಿಕ ವಿಚಾರಗಳನ್ನು ಅಳವಡಿಸಿಕೊಂಡರೆ ಮಾದರಿ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಇಂದುಮತಿ ಮತ್ತಿತರರು ಉಪಸ್ಥಿತರಿದ್ದರು.