ಮೈಸೂರು

ಪುಸ್ತಕಗಳು ಮಕ್ಕಳ ಕಲ್ಪನಾ ಶಕ್ತಿ ಹೆಚ್ಚಿಸುತ್ತದೆ: ಡಿಸಿ ರಂದೀಪ್

ಕಲಿಸು ಫೌಂಡೇಶನ್ ಬೆಂಗಳೂರಿನ ಫನಕ್ ಸಂಸ್ಥೆ ಸಹಯೋಗದಲ್ಲಿ ಮೈಸೂರಿನ ಮೇಟಗಳ್ಳಿ ಕುವಂಎಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಶುಕ್ರವಾರ ಉದ್ಘಾಟಿಸಿದರು.

ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಶ್ರಮಿಸುತ್ತಿರುವ ಕಲಿಸು ಫೌಂಡೇಶನ್ ನಗರದ ವಿವಿಧ ಕಡೆ ನಾಲ್ಕು ಗ್ರಂಥಾಲಯಗಳನ್ನು ಸ್ಥಾಪಿಸಿದ್ದು, 5ನೇಯ ಗ್ರಂಥಾಲಯವನ್ನು ಸರಕಾರಿ ಶಾಲೆಯ ಮಕ್ಕಳಿಗೆ ಕೊಡುಗೆಯಾಗಿ ನೀಡಿತು.

ಜಿಲ್ಲಾಧಿಕಾರಿ ರಂದೀಪ್ ಮಾತನಾಡಿ, ಪುಸ್ತಕಗಳು ಯಾವುದೇ ತರಗತಿಗಿಂತಲೂ ಹೆಚ್ಚು ಕಲಿಸುತ್ತವೆ. ಪುಸ್ತಕಗಳು ಸಂಪೂರ್ಣ ಹೊಸ ಜಗತ್ತನ್ನೇ ತೆರೆದಿಡುತ್ತವೆ. ಪುಸ್ತಕಗಳು ಮಗುವಿನ ಕಲ್ಪನಾ ಶಕ್ತಿ ಹಾಗೂ ಯೋಚನಾಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ತಮ್ಮ ಸೃಜನಶೀಲತೆ ವೃದ್ಧಿಸಿಕೊಳ್ಳಲು ಅವಕಾಶ ನೀಡುತ್ತವೆ ಎಂದು ಹೇಳಿದರು.

ಕಲಿಸು ಫೌಂಡೇಶನ್ ಸಿಇಒ ಎಂ.ಎಂ. ನಿಖಿಲೇಶ್, ತರಗತಿಯ ಹೊರಗಿನ ಕಲಿಕೆಯು ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸುತ್ತದೆ. ಹೀಗಾಗಿ, ಗ್ರಂಥಾಲಯವನ್ನು ಆರಂಭಿಸಿ ಅವರಿಗೆ ಓದಲು ಅನುಕೂಲ ಮಾಡಿಕೊಡಲಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣ ಅನಿವಾರ್ಯವಾಗಿದೆ. ನಾವು ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

ಜಿಪಂ ಸಿಇಒ ಪಿ.ಶಿವಶಂಕರ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ, ಮುಖ್ಯೋಪಾಧ್ಯಾಯ ಕೃಷ್ಣಪ್ಪ, ಕಲಿಸು ಫೌಂಢೇಶನ್ ಸಲಹೆಗಾರ ಮಲ್ಲಿಕಾರ್ಜುನ, ತೇಜಸ್, ಪ್ರಗತಿ, ಅಬೀದಾ, ರಂಗನಾಥ್, ಗಣೇಶ್, ಕ್ಯಾರೀನ್, ವೈಷ್ಣವಿ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: