ದೇಶಪ್ರಮುಖ ಸುದ್ದಿ

ಬುಕ್ ಮಾಡಿದ ರೈಲ್ವೆ ಟಿಕೆಟ್ ಬೇರೊಬ್ಬರ ಹೆಸರಿಗೆ ಬದಲಿಸಲು ಅವಕಾಶ

ನವದೆಹಲಿ (ಮಾ.9): ರೈಲ್ವೇ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿದ್ದೀರಿ, ಆದರೆ ಆ ಸಮಯದಲ್ಲಿ ನಿಮಗೆ ಪ್ರಯಾಣಿಸಲು ಸಾಧ್ಯವಿಲ್ಲವೇ? ಚಿಂತೆ ಬೇಡ. ಏಕೆಂದರೆ ರೈಲ್ವೆ ಇಲಾಖೆಯ ಹೊಸ ಮಾರ್ಗ ಸೂಚಿಯಂತೆ ಒಮ್ಮೆ ಬುಕ್ ಮಾಡಿದ ಟಿಕೆಟ್ ಅನ್ನು ಪ್ರಯಾಣ ಸಾಧ್ಯವಾಗದಿದ್ದರೆ ಬೇರೊಬ್ಬರಿಗೆ ವರ್ಗಾಯಿಸಬಹುದು.

ಹೌದು, ಈ ಹೊಸ ಮಾರ್ಗಸೂಚಿಯಲ್ಲಿ ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ಕೂಡ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಭಾರತೀಯ ರೈಲ್ವೇ ಇಲಾಖೆ ಈ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿ ವಿಧಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ, ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿರುವ ಮುಖ್ಯ ಮೀಸಲು ಮೇಲ್ವಿಚಾರಕರು ನಿಮ್ಮ ಹೆಸರಿನಲ್ಲಿ ಕಾಯ್ದಿರಿಸಿದ್ದ ಆಸನ ಅಥವಾ ಬರ್ತ್ ಅನ್ನು ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ವರ್ಗಾಯಿಸುವ ಅಧಿಕಾರ ಹೊಂದಿರುತ್ತಾರೆ.

ಪ್ರಯಾಣಿಕರು ಸರ್ಕಾರಿ ನೌಕರರಾಗಿದ್ದ ಪಕ್ಷದಲ್ಲಿ, ಆತ ಅಥವಾ ಆಕೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರೆ ಅಂತಹ ವ್ಯಕ್ತಿಗಳು ರೈಲು ನಿರ್ಗಮನದ 24 ಗಂಟೆಗಳಿಗೆ ಮೊದಲು ಹೆಸರು ಬದಲಾವಣೆಯನ್ನು ಕೋರಿ ಲಿಖಿತ ಕೋರಿಕೆ ಸಲ್ಲಿಸಬಹುದಾಗಿದೆ. ಹಾಗೆ ಮಾಡಿದಲ್ಲಿ ಯಾರ ಹೆಸರಿನ ಟಿಕೆಟ್ ಯಾರ ಹೆಸರಿಗೆ ವರ್ಗಾವಣೆ ಮಾಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿ ಟಿಕೆಟ್‍ನಲ್ಲೂ ಹೆಸರನ್ನು ಬದಲಿಸಲಾಗುವುದು.

ಯಾವುದೇ ವ್ಯಕ್ತಿ ತನ್ನ ಕುಟುಂಬದ ಇತರರಿಗೆ ಎಂದರೆ- ತಂದೆ, ತಾಯಿ, ಸೋದರ, ಸೋದರಿ, ಪತಿ, ಪತ್ನಿ ಹೀಗೆ ಯಾವ ವ್ಯಕ್ತಿಯ ಹೆಸರಿನಲ್ಲಿ ಟಿಕೆಟ್ ಬದಲಿಸಲು ಅವಕಾಶವಿದ್ದು ರೈಲು ಹೊರಡಲಿರುವ 24 ಗಂಟೆಗಳೊಳಗೆ ಟಿಕೆಟ್ ಖಾತ್ರಿಯಾಗಿರುವ ವ್ಯಕ್ತಿಯು ಲಿಖಿತ ಮನವಿಯನ್ನು ಸಲ್ಲಿಸಿ ತನ್ನ ಕುಟುಂಬ ಸದಸ್ಯರ ಹೆಸರಿಗೆ ಟಿಕೆಟ್ ವರ್ಗಾವಣೆ ಮಾಡಿಸಬಹುದಾಗಿದೆ.

ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸಿದ ವ್ಯಕ್ತಿ ಯಾವುದೇ ದೃಢೀಕರಿಸಲ್ಪಟ್ಟ ವಿಶ್ವವಿದ್ಯಾನಿಲಯ, ಶಾಲೆ, ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿಯಾಗಿದ್ದಲ್ಲಿ ಅಂತಹ ವ್ಯಕ್ತಿ ಸಹ ಟಿಕೆಟ್ ಬದಲಿಸಲು ಅವಕಾಶವಿದೆ. ರೈಲು ನಿರ್ಗಮಿಸುವ 48 ಗಂಟೆಗೆ ಮುಂಚಿತವಾಗಿ ಆ ವಿದ್ಯಾರ್ಥಿ ಅಭ್ಯಾಸ ನಡೆಸುತ್ತಿರುವ ಶಿಕ್ಷಣ ಸಂಸ್ಥೆ ಇದಕ್ಕಾಗಿ ಲಿಖಿತ ವಿನಂತಿ ಮಾಡಿಕೊಳ್ಳಬೇಕು. ಇಂತಹ ಲಿಖಿತ ವಿನಂತಿಯ ಮೂಲಕ ಸಂಸ್ಥೆಯ ಓರ್ವ ವಿದ್ಯಾರ್ಥಿಯ ಹೆಸರಲ್ಲಿದ್ದ ಟಿಕೆಟ್ ಅನ್ನು ಅದೇ ಸಂಸ್ಥೆಯ ಇನ್ನೋರ್ವ ವಿದ್ಯಾರ್ಥಿಯ ಹೆಸರಿಗೆ ವರ್ಗಾವಣೆ ಮಾಡಬಹುದಾಗಿದೆ.

ಒಂದೊಮ್ಮೆ ಟಿಕೆಟ್ ಕಾಯ್ದಿರಿಸಿದ್ದ ವ್ಯಕ್ತಿ ಮದುವೆ ಕಾರ್ಯಕ್ರಮ ನಡೆಯುವ ಕುಟುಂಬ ಅಥವಾ ಗುಂಪಿನವನಾದರೆ ರೈಲ್ವೆ ಟಿಕೆಟ್ ವರ್ಗಾವಣೆ ಮಾಡುವ ಸಂಬಂಧ ಆತನ ಗುಂಪಿನ ಮುಖ್ಯಸ್ಥರಿಂದ ಲಿಖಿತ ಮನವಿಯನ್ನು ಸಲ್ಲಿಸಬೇಕಾಗುವುದು. ನಿಗದಿತ ರೈಲು ನಿರ್ಗಮನದ 48 ಗಂಟೆಗಳಿಗೆ ಮುನ್ನ ಕೋರಿಕೆ ಸಲ್ಲಿಸಿದಲ್ಲಿ ಮದುವೆ ಸಮಾಂರಂಭದ ಗುಂಪಿನ ಓರ್ವ ವ್ಯಕ್ತಿಯ ಹೆಸರಲ್ಲಿದ್ದ ಟಿಕೆಟ್ ಅನ್ನು ಅದೇ ಗುಂಪಿನ ಇನ್ನೋರ್ವ ವ್ಯಕ್ತಿಯ ಹೆಸರಿಗೆ ಬದಲಿಸಲು ಅವಕಾಶವಿದೆ.

ಎನ್‍ಸಿಸಿ ಕೆಡೆಟ್‍ಗಳು ತಾವು ಗುಂಪು ಪ್ರಯಾಣಕ್ಕಾಗಿ ಟಿಕೆಟ್ ಅಥವಾ ಬರ್ತ್ ಕಾಯ್ದಿರಿಸಿದ್ದರೆ, ತಮ್ಮ ಹೆಸರಲ್ಲಿನ ಟಿಕೆಟ್ ಅನ್ನು ಇನ್ನೊಂದು ಅದೇ ರೀತಿಯ ಗುಂಪಿಗೆ ವರ್ಗಾಯಿಸಲು ಬಯಸಿದಲ್ಲಿ ಆಯಾ ಗುಂಪಿನ ಮುಖ್ಯಸ್ಥರು ನಿಗದಿತ ರೈಲು ನಿರ್ಗಮನಕ್ಕೆ 24 ಗಂಟೆಗೆ ಮುನ್ನ ಲಿಖಿತ ಮನವಿ ಸಲ್ಲಿಕೆ ಮಾಡಬೇಕಾಗುವುದು.

ಇಂತಹ ಕೋರಿಕೆ ಅಥವಾ ಮನವಿಯನ್ನು ಓರ್ವ ವ್ಯಕ್ತಿ ಅಥವಾ ಸಂಸ್ಥೆಯಿಂದ ಒಂದು ಬಾರಿ ಮಾತ್ರವೇ ಪುರಸ್ಕರಿಸಲಾಗುವುದು. ಇನ್ನು ಎನ್‍ಸಿಸಿ, ವಿವಾಹದ ತಯಾರಿಯಲ್ಲಿನ ಗುಂಪು, ವಿದ್ಯಾರ್ಥಿಗಳ ವಿಚಾರದಲ್ಲಿ ಸಹ ಒಟ್ಟಾರೆ ಗುಂಪಿನ ಶೇ.10 ರಷ್ಟು ಮಂದಿಯ ಕೋರಿಕೆ ಮಾತ್ರವೇ ಈಡೇರಲಿದ್ದು ಶೇ.10ಕ್ಕಿಂತ ಹೆಚ್ಚಿನ ಪ್ರಮಾಣದ ಸದಸ್ಯರಿಂದ ಟಿಕೆಟ್ ಬದಲಾವಣೆ ಕೋರಿಕೆ ಬಂದಲ್ಲಿ ಅದು ತಿರಸ್ಕರಿಸಲ್ಪಡುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ (ಎನ್.ಬಿ)

Leave a Reply

comments

Related Articles

error: