ಮೈಸೂರು

ಮೋದಿ ಅವರ ದಿಟ್ಟ ನಿರ್ಧಾರ ಕಾಳಧನಿಕರಿಗೆ ಅಘಾತವನ್ನುಂಟು ಮಾಡಿದೆ: ಜಿ.ಕೆ.ಬಾಲಕೃಷ್ಣ

ಭಾರತದ ಬದಲಾವಣೆಯ ಅವಲೋಕನ ಮಾಡುವ ರಸಘಳಿಗೆ ಈಗ ಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಮಹತ್ವಪೂರ್ಣ ನೋಟಿನ ಅಪಮೌಲ್ಯ ನಿರ್ಧಾರ, ಭ್ರಷ್ಟಾಚಾರಿಗಳಿಗೆ, ಖೋಟಾ ನೋಟು ಕಳ್ಳರಿಗೆ, ಭಯೋತ್ಪಾದಕರಿಗೆ ಮತ್ತು ರಿಯಲ್ ಎಸ್ಟೇಟ್ ದಂಧೆ ಮಾಡುವವರಿಗೆ ಏಕಕಾಲದಲ್ಲಿ ಮಾರಣಾಂತಿಕ ಆಘಾತ ಉಂಟುಮಾಡಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಜಿ.ಕೆ.ಬಾಲಕೃಷ್ಣ ಅವರು ಅಭಿಪ್ರಾಯಪಟ್ಟರು.

ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಮೈಸೂರು ನಗರದ 8 ರೋಟರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ನಡೆದ ‘ಸಂಭ್ರಮ ಭಾರತ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂಭ್ರಮ ಭಾರತ ಆಚರಣೆಯಲ್ಲಿ ಬದಲಾವಣೆ ಅತ್ಯಂತ ಸಹಜ ಹಾಗೂ ಮಾನವ ಸಮಾಜದ ಜೀವಾಳ ಎಂದು ತಿಳಿಸಿದರು. ರೋಟರಿ ಸಂಸ್ಥೆ ಮನುಕುಲದ ಸೇವೆಯಲ್ಲಿ ನಿರತವಾಗಿರುವುದನ್ನು ವಿವರಿಸಿದರು.

ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ ಮತ್ತು ರೈತ ಸಂಘದ ನಾಯಕ ಡಾ.ಕೆ.ಸಿ. ಬಸವರಾಜು ಮಾತನಾಡಿ, ವಾಂಚು ಸಮಿತಿ, ಪಿ.ವಿ.ನರಸಿಂಹರಾವ್  ಹಾಗೂ ಮನಮೋಹನ್ ಸಿಂಗ್ ಆರಂಭಿಸಿದ್ದ ಆರ್ಥಿಕ ಸುಧಾರಣೆ ಅತ್ಯಂತ ಮಹತ್ವದ ಹೆಜ್ಜೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಪಮೌಲ್ಯ ತೀರ್ಮಾನದಿಂದ ಭಾರತ ಮುಂದೆ ಆರ್ಥಿಕವಾಗಿ ಸದೃಢವಾಗಿ ಪ್ರಪಂಚದ ಶಕ್ತಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ ರಾಜೀವ್  ಅವರು ‘ಸ್ವಚ್ಛ ಭಾರತ ಅಭಿಯಾನ’ ವಿಷಯದ ಬಗ್ಗೆ ಮಾತನಾಡಿ, ಭಾರತದ ಜನತೆಯ ಮಾನಸಿಕ ಬದಲಾವಣೆ ಆಗದ ಹೊರತು ‘ಸ್ವಚ್ಛ ಭಾರತ ಆಂದೋಲನ’ ಯಶಸ್ವಿಯಾಗುವುದು ಕಷ್ಟ. ಮೈಸೂರು ನಗರ 2 ಬಾರಿ ಸ್ವಚ್ಛ ನಗರಿ ಎಂಬ ಕೀರ್ತಿಗೆ ಪಾತ್ರವಾಗಿದೆ. ನಾವು ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು, ನಗರದ ಸಂಘ-ಸಂಸ್ಥೆಗಳನ್ನು ಸಕ್ರಿಯವಾಗಿ ಬಳಸಿಕೊಂಡು ಮೂಲಭೂತ ಮಾನಸಿಕ ಬದಲಾವಣೆ ತರುವುದರಿಂದ ಭಾರತ ಸ್ವಚ್ಛವಾಗುತ್ತದೆ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ, ತ್ಯಾಜ್ಯ ವಿಂಗಡಣೆ ಎಷ್ಟು ಮುಖ್ಯವೋ ತ್ಯಾಜ್ಯ ನಿರ್ವಹಣೆ ಅಷ್ಟೇ ಮುಖ್ಯ. ಮೈಸೂರಿನ ರೋಟರಿ ಸಂಸ್ಥೆಗಳೊಡನೆ ಕೈ ಜೋಡಿಸಲು ನಾನು ಸಿದ್ಧನಿದ್ದೇನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಸಿ.ಆರ್.ಹನುಮಂತು ವಹಿಸಿದ್ದರು. ಮೈಸೂರಿನ 8 ರೋಟರಿ ಸಂಸ್ಥೆಗಳ ಅಧ್ಯಕ್ಷರಾದ ರೋ.ಮಹದೇವಪ್ಪ, ರೋ.ಕೆ.ಎಸ್ ರಾಘವೇಂದ್ರ, ರೋ.ಇಂದಿರ ಬಲ್ಲಾಳ್, ರೋ.ಸಿ.ಗೋಪಾಲ್, ರೋ.ಎನ್.ಪಿ.ಬಾಲಾಜಿ, ರೋ.ವೈ.ಎಸ್. ರಾಘವೇಂದ್ರ ಮತ್ತು ರೋ. ಆರ್ಮುಗಂ ಉಪಸ್ಥಿತರಿದ್ದರು.

Leave a Reply

comments

Related Articles

error: