
ವಿದೇಶ
ದ್ವೀಪರಾಷ್ಟ್ರ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಇನ್ನಿಲ್ಲ
ಹವಾನಾ: ಅಮೆರಿಕವನ್ನೇ ನಡುಗಿಸಿದ್ದ ಉಕ್ಕಿನ ಸರದಾರ, ಮಹಾನ್ ಮಾನವತಾವಾದಿ, ದ್ವೀಪರಾಷ್ಟ್ರ ಕ್ಯೂಬಾದ ಕ್ರಾಂತಿಕಾರಿ ನಾಯಕ ಮತ್ತು ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ(90) ಶುಕ್ರವಾರ ರಾತ್ರಿ ನಿಧನರಾದರು. ಮಾರ್ಕ್ಸ್ವಾದಿ ಹೋರಾಟಗಾರರಾದ ಚೆ. ಗುವೆರಾ ಹಾಗೂ ಫಿಡೆಲ್ ಕಾಸ್ಟ್ರೊ1959ರ ಕ್ಯೂಬಾ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಕಾಸ್ಟ್ರೋ ಸುಮಾರು ಅರ್ಧ ಶತಮಾನದಷ್ಟು ಸುದೀರ್ಘ ಅವಧಿಯಲ್ಲಿ ಕ್ಯೂಬಾದಲ್ಲಿ ಆಡಳಿತ ನಡೆಸಿದ್ದರು.
ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ ತಮ್ಮ ಸಹೋದರ ರೌಲ್ ಕಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರಿಸಿದ್ದರು. ಕ್ಯಾಸ್ಟ್ರೊ ಈ ವರ್ಷದ ಆಗಸ್ಟ್ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಕರುಳು ಬೇನೆಯಿಂದ ನರಳುತ್ತಿದ್ದ ಕಾಸ್ಟ್ರೊ ಅವರು ಶುಕ್ರವಾರ ರಾತ್ರಿ 10.29ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಸಹೋದರ ರೌಲ್ ಕಾಸ್ಟ್ರೊ ತಿಳಿಸಿದ್ದಾರೆ.