ಮೈಸೂರು

ಮಹಿಳೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅಂತರಂಗ ಅನಾವರಣ ಅಗತ್ಯ : ಡಾ.ಕೆ.ಅನಂತರಾಮು

ಮೈಸೂರು, ಮಾ.12:-ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಶಾಖೆಯ ವತಿಯಿಂದ ‘ಮಹಿಳೆಯ ಪ್ರಸಕ್ತ ಸವಾಲುಗಳು ಹಾಗೂ ಆಯ್ಕೆಗಳು’ ಎಂಬ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಭಾನುವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಹಾಗೂ ಹೆಸರಾಂತ ಚಿಂತಕ ಡಾ.ಕೆ.ಅನಂತರಾಮು ಮಾತನಾಡಿ ಇದು ಬಹು ಒಳ್ಳೆಯ ಕಾರ್ಯಕ್ರಮ. ಮಹಿಳೆಯರ ಯೋಗಕ್ಷೇಮ ಕೇಳೋಣ, ಮಹಿಳೆಯರಿಗೆ ಕಾಣಿಕೆ ಸಲ್ಲಿಸೋಣ. ಇದನ್ನು ಆಯೋಜಿಸಿರುವ ಬ್ರಹ್ಮಕುಮಾರಿ ಸಂಸ್ಥೆಗೆ ನನ್ನ ಅನಂತ ನಮನಗಳು. ಒಂದು ಕಾಲದಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸದ ಕೊರತೆ, ಸಹಗಮನ ಹಾಗೂ ವರದಕ್ಷಿಣೆ ಪಿಡುಗಿತ್ತು. ಈಗ ಅಂತಹ ಸವಾಲುಗಳು ಮಹಿಳೆಯರಿಗಿಲ್ಲ. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ವಿಜೃಂಭಿಸುತ್ತಿದ್ದಾರೆ. ಕ್ರೀಡೆ, ಸಾಹಿತ್ಯ, ಸಂಗೀತ ಹೀಗೆ ಎಲ್ಲಾ ರಂಗದಲ್ಲಿಯೂ ಮಹಿಳೆ ಮುಂದಿದ್ದಾಳೆ. ವಿಶ್ವದಲ್ಲಿ ಮಹಿಳೆಯರೇ ನಡೆಸಲ್ಪಡುತ್ತಿರುವ ಅತ್ಯಂತ ಬೃಹತ್ ಸಂಸ್ಥೆ ಎಂದರೆ ಬ್ರಹ್ಮಕುಮಾರಿ ಸಂಸ್ಥೆ. ದು:ಖ ಯಾರಿಗೂ ತಪ್ಪಿದ್ದಲ್ಲ. ಕೋಟಿ ಸರಕಾರ, ಕೋಟಿ ಕಾನೂನು ಬಂದರೂ ಅತ್ತೆ, ಸೊಸೆ ಜಗಳ ಬಿಡಿಸಲು ಸಾಧ್ಯವಿಲ್ಲ. ಗ್ರಾಮಾಂತರ ಮಹಿಳೆಯರ ಸಮಸ್ಯೆಗಳು, ನಗರದ ಮಹಿಳೆಯರ ಸಮಸ್ಯೆಗಳಿಗಿಂತ ಭಿನ್ನ. ಇಂದಿನ ದಿನ ಪ್ರತಿಯೊಬ್ಬ ಮಹಿಳೆಗೂ ಒಬ್ಬೊಬ್ಬ ಪೊಲೀಸ್ ನ್ನು ನಿಯೋಜಿಸಲು ಸಾಧ್ಯವಿಲ್ಲ. ಮಹಿಳೆಯು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅಂತರಂಗವನ್ನು ಅನಾವರಣಗೊಳಿಸುವ ವ್ಯವಸ್ಥೆಯನ್ನು ಪ್ರತಿಯೊಬ್ಬ ಮಹಿಳೆಯೂ ಸ್ವತ: ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ರಾಜಯೋಗ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಬಿ.ಕೆ.ರಂಗನಾಥ್ ನಡೆಸಿಕೊಟ್ಟರು. ಶಾರದಾ ವಿಲಾಸ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿಮಲಶ್ರೀ ಹಾಗೂ ಆಕಾಶವಾಣಿಯ ನಿರೂಪಕಿ ಎಂ.ಎಸ್.ಭಾರತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿಯವರು ಸಾನಿಧ್ಯ ವಹಿಸಿದ್ದರು.  ಸಂಸ್ಥೆಯ ಪರಿಚಯವನ್ನು ಬಿ.ಕೆ.ಶಾರದಾಜಿಯವರು, ರಾಜಯೋಗ ಅಭ್ಯಾಸವನ್ನು ಬಿ.ಕೆ.ವಾಣೀಜಿ ಮತ್ತು ನಿರೂಪಣೆಯನ್ನು ಬಿ.ಕೆ.ಶಿವಲೀಲಾ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ 20 ಮಹಿಳಾ ಸಂಘಗಳ ಅಧ್ಯಕ್ಷರಿಗೆ ಅವರ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಹಾಗೂ ಕಾರ್ಯಕ್ರಮದ ಪ್ರಯುಕ್ತ ಮಹಿಳೆಯರಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಮಹಿಳಾ ದಿನಾಚರಣೆಯ ಪ್ರಯುಕ್ತ ಯಾದವಗಿರಿ, ಒಂಟಿಕೊಪ್ಪಲು ಮತ್ತು ವಿನಾಯಕನಗರದ ಮುಖ್ಯ ಬೀದಿಗಳಲ್ಲಿ ಸುಮಾರು 200 ಮಂದಿ ಮಹಿಳೆಯರು ಕಳಶಗಳನ್ನು ಹೊತ್ತು ಮಹಿಳೆಯರ ಮಹತ್ವವನ್ನು ಸಾರಲು ಬ್ಯಾಂಡ್ ಸೆಟ್ ಹಾಗೂ ನಾದಸ್ವರದ ಸಹಿತ ಆಕರ್ಷಕ ಮೆರವಣಿಗೆಯಲ್ಲಿ ಸಾಗಿದರು. (ಜಿ.ಕೆ,ಎಸ್,ಎಚ್)

Leave a Reply

comments

Related Articles

error: