ಮೈಸೂರು

ಎಲ್ಲಾ ಕಲೆಗಳ ಉದ್ದೇಶವೇ ಆನಂದ ನೀಡುವುದು : ಶತಾವಧಾನಿ ಗಣೇಶ್

ಎಲ್ಲರಿಗೂ ಆನಂದವಿರುತ್ತದೆ. ಆದರೆ, ರಸಾನಂದವಿರುವುದಿಲ್ಲ. ಕಲೆಯ ಮೂಲಕ ಬಂದ ಆನಂದವೇ ರಸಾನಂದ ಎಂದು ಶತಾವಧಾನಿ ಡಾ.ಆರ್.ಗಣೇಶ್ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾದಬ್ರಹ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ನೃತ್ಯದಲ್ಲಿ ಅಷ್ಟನಾಯಿಕೆಯರು ಕುರಿತ ವಿಶೇಷ ಉಪನ್ಯಾಸ ಶತಾವಧಾನಿ ಗಣೇಶ್ ನೀಡಿದರು. ಇತ್ತೀಚಿನ ದಿನಗಳಲ್ಲಿ ನಾಯಕಾಭಿನಯ, ನಾಯಕಿ ಅಭಿನಯ ಎಂಬ ಸಂಪ್ರದಾಯ ಹುಟ್ಟಿಕೊಂಡಿದೆ. ಒಂದೊಂದು ಕಲೆಯೂ ವಿಭಿನ್ನವಾಗಿದ್ದರೂ ಎಲ್ಲಾ ಕಲೆಗಳ ಪರಮೋದ್ದೇಶ ಆನಂದ. ಈ ಆನಂದ ಪ್ರತಿಯೊಬ್ಬರಲ್ಲಿ ಇದ್ದರೂ ಎಲ್ಲರಲ್ಲೂ ರಸಾನಂದವಿರುವುದಿಲ್ಲ. ಸಹೃದಯಿಗಳಲ್ಲಿ ಮಾತ್ರ ರಸಾನಂದವಿರುತ್ತದೆ. ಯಾವುದೇ ಅಜೆಂಡಾ, ಸ್ವಾರ್ಥವಿಲ್ಲದೆ ಕಲೆಯನ್ನು, ಸೌಂದರ್ಯವನ್ನು ಅನುಭವಿಸಿದಾಗ ಮಾತ್ರ ರಸಾನಂದ ಸಿಗುತ್ತದೆ ಎಂದು ತಿಳಿಸಿದರು.

ರಸಾನಂದದಿಂದ ನಮ್ಮ ಭಾವನೆಗಳು ಹೊರಬರುತ್ತವೆ.  ಸ್ವಾರ್ಥ ಅಂತರಂಗದ ಭಾವವನ್ನು ಅಪಾರದರ್ಶಕವಾಗಿಸಿದರೆ ಆನಂದ ಅದನ್ನುಪಾರದರ್ಶಕವಾಗಿ ಮಾಡುತ್ತದೆ. ಯಾವುದು ಬಹಿರಂಗದಲ್ಲಿ ಅಸಭ್ಯವೆನಿಸುತ್ತದೋ ಅದು ಅಂತರಂಗದಲ್ಲಿ ಅನಿವಾರ್ಯವಾಗಿರುತ್ತದೆ. ನಮ್ಮ ಆದರ್ಶಗಳೇ ನಮಗೆ ನಾಯಕನಾಗಿದ್ದು ಅದನ್ನು ಪಡೆದಾಗ ಮಾತ್ರ  ತೃಪ್ತಿ ದೊರೆಯುತ್ತದೆ. ಇಲ್ಲದಿದ್ದರೆ ಸಂಕಷ್ಟಗಳೇ ಎದುರಾಗುತ್ತವೆ. ಶೃಂಗಾರ ಅಂತರಂಗದ ನಡುಮನೆಯಾಗಿದ್ದು ಇದರಲ್ಲೇ ಹೆಚ್ಚು ಕಾಲ ಕಳೆಯುತ್ತೇವೆ. ಹಾಗಾಗಿ ಇದರ ವ್ಯಾಪ್ತಿ ದೊಡ್ಡದು. ಶೃಂಗಾರ ರತಿಯಲ್ಲ ಅದೊಂದು ರಸ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಾ.ಶೋಭಾ ಶಶಿಕುಮಾರ್ ಅವರು ಭಾರತೀಯ ನೃತ್ಯದಲ್ಲಿ ಅಷ್ಟನಾಯಿಕೆಯರು ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್, ಸುಲಸಚಿವ ಡಾ.ನಿರಂಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: