ಮೈಸೂರು

ಭಾರತದ ಸಂವಿಧಾನ ಬಹುತೇಕ ದೇಶಗಳಿಗೆ ಮಾದರಿ : ಡಾ.ಪಿ.ಎಸ್.ಗಂಗಾಧರ್

ನಮ್ಮ  ಸಂವಿಧಾನವು ಸಮಸ್ತ ಭಾರತೀಯರ ಗುರಿ, ಭರವಸೆ ಆಶಯಗಳ ಅಭಿವ್ಯಕ್ತಿ, ಧ್ಯೇಯಗಳ ಪ್ರತಿಬಿಂಬವಾಗಿದೆ. ನಮ್ಮ ಸಂವಿಧಾನವು ನಮ್ಮ ವ್ಯಕ್ತಿತ್ವ ವಿಕಾಸನಕ್ಕೆ ಮಾರ್ಗದರ್ಶಿಯಾಗಿದೆ. ಇಲ್ಲಿನ ಪ್ರಜಾತಾಂತ್ರಿಕ ವಿಧಾನಗಳಲ್ಲಿ ಒಂದಷ್ಟು ದೋಷಗಳಿದ್ದರೂ ಜಗತ್ತಿನ ಬಹುತೇಕ ದೇಶಗಳಿಗೆ ನಮ್ಮ ಸಂವಿಧಾನ ಮಾದರಿಯಾಗಿದೆ ಎಂದು ನಂಜನಗೂಡು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ.ಎಸ್.ಗಂಗಾಧರ್ ತಿಳಿಸಿದರು.

ಮೈಸೂರಿನ ಬಿಎನ್ ರಸ್ತೆಯಲ್ಲಿರುವ  ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಪಿ.ಎಸ್.ಗಂಗಾಧರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ನಮ್ಮ ಸಂವಿಧಾನವು ಸರ್ಕಾರದ ಸರ್ವಾಧಿಕಾರವನ್ನು ನಿಯಂತ್ರಿಸುತ್ತದೆ. ಕಾನೂನಿನ ಆಳ್ವಿಕೆ ಎನ್ನುವುದು ವ್ಯಕ್ತಿಯ ಇಷ್ಟಾನಿಷ್ಟಕ್ಕೆ ತಕ್ಕಂತೆ ಮಾಡಲು ಅವಕಾಶವಿಲ್ಲ. ಇದರಿಂದಾಗಿ ನಮ್ಮಲ್ಲಿ ವೈವಿಧ್ಯತೆಯಲ್ಲಿ ಏಕತೆ, ರಾಜಕೀಯ ಆರ್ಥಿಕ ಹಾಗೂ  ಸಾಮಾಜಿಕ ನ್ಯಾಯಗಳು ಸಾಧ್ಯವಾಗಿವೆ. ಸಾರ್ವತ್ರಿಕ ಮತದಾನಕ್ಕೆ ಅವಕಾಶವಿದ್ದು, ಎಲ್ಲಾ ಬಗೆಯ ಶೋಷಣೆಗಳು ಶಿಕ್ಷಾರ್ಹ ಅಪರಾಧವಾಗಿವೆ ಎಂದರು. ನಮ್ಮ ಸಂವಿಧಾನವು ಲೋಕಾರ್ಪಣೆಗೊಂಡ ಈ ದಿನವು ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದ ದಿನವಾಗಿದೆ, ಇಂದು ನವೆಂಬರ್ 26ನ್ನು  ಸಂವಿಧಾನ ಸಂಸ್ಥಾಪನಾ ದಿನ, ಸಂವಿಧಾನ ದಿನ ಎಂದೆಲ್ಲ ರಾಷ್ಟ್ರಾದ್ಯಂತ ಆಚರಿಸುತ್ತಿದ್ದೇವೆ. ಭಾರತ ಸಂವಿಧಾನದ ರಚನೆಯ ಹಿನ್ನೆಲೆ, ಸಂವಿಧಾನದ ಆಶಯಗಳು ಮತ್ತು ಆ ಆಶಯಗಳನ್ನು ಸಾಕಾರಗೊಳಿಸುವಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಪ್ರಸ್ತಾಪಿಸಿದರು.

ಎರಡನೆ ಜಾಗತಿಕ ಸಮರದ ವೇಳೆ ಬ್ರಿಟನ್‍ಗೆ ಬೆಂಬಲ ನೀಡಿದ್ದ ನಮ್ಮ ರಾಷ್ಟ್ರೀಯ ನಾಯಕರು ಭಾರತದ ಸ್ವಾತಂತ್ರ್ಯಕ್ಕೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಭವಿಷ್ಯದ ಭಾರತಕ್ಕೆ ಸಂವಿಧಾನ ಅಗತ್ಯತೆಯನ್ನು ಮನಗಂಡು ಕಾರ್ಯಪ್ರವೃತ್ತರಾದರು. 1947 ರಲ್ಲಿ ಸಂವಿಧಾನ ರಚನಾ ಸಭೆ ಸೇರಿ, 22 ಸಮಿತಿಗಳು, ಮಹತ್ವದ ಕರಡು ಸಮಿತಿಯು ಸಹ ರೂಪುಗೊಂಡಿತು. ಡಾ ಬಿ ಆರ್ ಅಂಬೇಡ್ಕರ್ ನೇತೃತ್ವದ ಈ ಸಮಿತಿ 2 ವರ್ಷ 11 ತಿಂಗಳವರೆಗೆ ಸತತ ಪರಿಶ್ರಮದಿಂದ ತನ್ನ ಕರಡನ್ನು ಸಿದ್ದಪಡಿಸಿತು. 1949 ರ ನವೆಂಬರ್ 26ರಂದು ಸಂವಿಧಾನದ ಕರಡು ಸಂಸತ್ತಿನಲ್ಲಿ ಮಂಡನೆಗೊಂಡು ಅಂಗೀಕೃತವಾಯಿತು ಎಂದು ಸಂವಿಧಾನ ದಿನಾಚರಣೆಯ ಹಿನ್ನೆಲೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ ಬಿ ವಿ ಸಾಂಬಶಿವಯ್ಯನವರು ಮಾತನಾಡಿ ನಮ್ಮ ಇಂದಿನ ಪ್ರಧಾನಿಗಳ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದ್ದಾರೆ. ಆ ಮೂಲಕ ನಮ್ಮ ಸಂವಿಧಾನದ ಮಹತ್ವ ಹಾಗೂ ಉದ್ದೇಶಗಳನ್ನು ತಿಳಿಯುವುದು, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರನ್ನು ಗೌರವಿಸುವುದು, ಜೊತೆಗೆ ಅಂದಿನ ಸಮಿತಿಯನ್ನು ಗೌರವಿಸುವ ಸದುದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ ಎಂ ಮಹದೇವಪ್, ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಎಸ್ .ಸೋಮಶೇಖರ  ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಎಸ್ ಬಿ ನಾಗರಾಜಮೂರ್ತಿ  ಕನ್ನಡ ವಿಭಾಗದ ಉಪನ್ಯಾಸಕ  ಎನ್. ಸಂತೋಷ್‍ಕುಮಾರ್   ಉಪಸ್ಥಿತರಿದ್ದರು.

 

Leave a Reply

comments

Related Articles

error: