ಮೈಸೂರು

ರಾಜ್ಯಗಳ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್ ಗೆ ತಲೆ ಹಾಕುವ ಹಕ್ಕಿಲ್ಲ : ಎಂ.ಕೆ.ರಮೇಶ್

ಸುಪ್ರೀಂಕೋರ್ಟ್ ಗೆ ರಾಜ್ಯಗಳ ನಡುವಿನ ವ್ಯಾಜ್ಯದಲ್ಲಿ ತಲೆ ಹಾಕುವ ಹಕ್ಕನ್ನು ಸಂವಿಧಾನ ನೀಡಿಲ್ಲ ಎಂದು ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಂ.ಕೆ ರಮೇಶ್ ಹೇಳಿದರು.

ಮೈಸೂರಿನ ವಿದ್ಯಾವರ್ಧಕ ಕಾನೂನು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡು ಎಂ.ಕೆ.ರಮೇಶ್ ಮಾತನಾಡಿದರು. ಇತ್ತೀಚೆಗೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ನೀರಿನ ಬಿಕ್ಕಟ್ಟು ತಲೆದೋರಿತ್ತು. ಆಗ ಅವುಗಳನ್ನು ಎರಡೂ ಸರ್ಕಾರಗಳೇ ಕುಳಿತು ಬಗೆಹರಿಸಿಕೊಳ್ಳಬೇಕಿತ್ತು. ನೀರಿನ ನಿರ್ವಹಣಾ ಮಂಡಳಿಯನ್ನು ಸಂವಿಧಾನ ಅದಕ್ಕೆಂದೇ ರಚಿಸಿದೆ. ಆದರೆ ಮಂಡಳಿ ಕಾನೂನಿಗೆ ಸ್ಫೂರ್ತಿಯಾಗಿಲ್ಲ. ಎರಡೂ ರಾಜ್ಯಗಳು ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಎದುರು ಬಂದಿವೆ. ಅದಕ್ಕಾಗಿ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಎನ್ನುವುದು ತನ್ನತನವನ್ನು ಕಂಡುಕೊಳ್ಳುವುದಕ್ಕಾಗಿ ಸೃಷ್ಟೀಕರಿಸಲಾದ ಸಾಧನ. ಅದು ಆಚರಣೆಗೆ ಬಂದಾಗ ಮಾತ್ರ ಯಶಸ್ಸು ಸಾಧ್ಯ ಎಂದರು. ಸಾಮಾಜಿಕ ಸ್ವಾತಂತ್ರ್ಯದ ದಿಕ್ಕಿನಲ್ಲಿ ರಾಜಕೀಯ ಸ್ವಾತಂತ್ರ್ಯ ನಡೆದಾಗ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಸಾಮಾಜಿಕ ನ್ಯಾಯವನ್ನು ಶ್ರದ್ಧೆಯಿಂದ ಪಾಲಿಸುವ ಕರ್ತವ್ಯವನ್ನು ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಸ್. ಸುಧೀಂದ್ರನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನ್ಯಾಯಾಂಗ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟು ಮಾಡುವುದನ್ನು ಒಪ್ಪುವುದಿಲ್ಲ. ಸಂವಿಧಾನ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಾವು ಸಂವಿಧಾನದ ಫಲಾನುಭವಿಗಳಾಗಿದ್ದು ಅದರ ಪರಿಪಾಲನೆಗೆ ಸದಾ ಸಿದ್ಧರಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶ ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ, ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: