ಕರ್ನಾಟಕ

ಮಾ.16 ರಂದು ಮಡಿಕೇರಿಯಲ್ಲಿ ಬಿಜೆಪಿ ಬೂತ್ ನವಶಕ್ತಿ ಕಾರ್ಯಾಗಾರ

ರಾಜ್ಯ(ಮಡಿಕೇರಿ )ಮಾ.13 :- ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿಗಳನ್ನು ಸಶಕ್ತಗೊಳಿಸುವ ಮೂಲಕ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಆದೇಶವನ್ನು ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲು ಮಾ.16 ರಂದು ಬೂತ್ ನವಶಕ್ತಿ ಕಾರ್ಯಾಗಾರವನ್ನು ನಡೆಸಲು ನಿರ್ಧರಿಸಿರುವುದಾಗಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು, ಕಾಂಗ್ರೆಸ್ ಮುಕ್ತ ಭಾರತದ ಗುರಿ ಹೊಂದಿರುವ ಬಿಜೆಪಿಗೆ ಕರ್ನಾಟಕದ ಚುನಾವಣೆ ಸವಾಲಾಗಿದೆ ಎಂದರು. ಪರಿವರ್ತನಾ ರ್ಯಾಲಿ, ಜನಸುರಕ್ಷಾ ಯಾತ್ರೆ, ಗ್ರಾಮ ಸಮಿತಿಗಳ ರಚನೆ, ಮತದಾರರ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಬಿಜೆಪಿ ಬಲವನ್ನು ವೃದ್ಧಿಸಲಾಗುತ್ತಿದೆ. ಬೂತ್ ಸಮಿತಿಗಳು ಸಶಕ್ತೀಕರಣಗೊಳ್ಳುತ್ತಿದ್ದು, ಪ್ರತಿ ಬೂತ್‍ನಲ್ಲಿ 9 ಪದಾಧಿಕಾರಿಗಳು ಇರುತ್ತಾರೆ.

ಈ ಕಾರಣದಿಂದ ನವಶಕ್ತಿ ಎನ್ನುವ ಹೆಸರಿನಡಿ ಮಾರ್ಚ್ 16 ರಂದು ನಗರದ ಕೆಳಗಿನ ಕೊಡವ ಸಮಾಜದಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಮಡಿಕೇರಿ ತಾಲ್ಲೂಕು ಬಿಜೆಪಿ ಹಾಗೂ ನಗರ ಬಿಜೆಪಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವÀರುಗಳಾದ ಡಿ.ವಿ.ಸದಾನಂದ ಗೌಡ, ಮನ್ಸುಕ್ ಎಲ್.ಮಾಂಡವ್ಯ, ಜಿಲ್ಲೆಯ ಬಿಜೆಪಿ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ಎಲ್ಲಾ ಮುಖಂಡರು ಪಾಲ್ಗೊಂಡು ಬೂತ್ ಸಮಿತಿ ಪದಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಾಲಚಂದ್ರ ಕಳಗಿ ತಿಳಿಸಿದರು. ಸೋಮವಾರಪೇಟೆ ಹಾಗೂ ವೀರಾಜಪೇಟೆಯಲ್ಲಿ ಕೂಡ ಕಾರ್ಯಾಗಾರ ನಡೆಯಲಿದೆ ಎಂದ ಅವರು, ಚುನಾವಣೆಯನ್ನು ಎದುರಿಸಲು ಅಗತ್ಯವಿರುವ ಮತ್ತೊಂದು ಮಹತ್ವದ ಸೂಚನೆಯನ್ನು ಅಮಿತ್ ಷಾ ಅವರು ಸಧ್ಯದಲ್ಲಿಯೇ ಪಕ್ಷಕ್ಕೆ ನೀಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ತಳೂರು ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ನಗರಾಧ್ಯಕ್ಷ ಮಹೇಶ್ ಜೈನಿ ಹಾಗೂ ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.     (ಕೆಸಿಐ,ಎಸ್.ಎಚ್)

Leave a Reply

comments

Related Articles

error: