ಕರ್ನಾಟಕ

ಅರಣ್ಯ ಛಿದ್ರೀಕರಣ ನಿಲ್ಲಬೇಕು, ವೈಜ್ಞಾನಿಕ ರೂಪದಲ್ಲಿ ಪರಿಸರ ಮತ್ತು ಅಭಿವೃದ್ಧಿಯ ಸಂಗಮವಾಗಬೇಕು : ಪ್ರವೀಣ್ ಭಾರ್ಗವ್ ಅಭಿಪ್ರಾಯ

ರಾಜ್ಯ(ಮಡಿಕೇರಿ) ಮಾ.13 :-  ಅಭಿವೃದ್ಧಿಯ ನೆಪದಲ್ಲಿ ಅರಣ್ಯಗಳ ಛಿದ್ರೀಕರಣವಾಗುವುದನ್ನು ತಡೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಖ್ಯಾತ ಪರಿಸರವಾದಿ ಪ್ರವೀಣ್ ಭಾರ್ಗವ್ ಜೀವಜಂತುಗಳು, ಹುಲ್ಲುಗಾವಲುಗಳು, ಔಷಧೀಯ ಸಸ್ಯಗಳ “ಸ್ಟೋರ್ ಹೌಸ್” ನಂತಿರುವ ಅದ್ಭುತ ನೆಲೆ ಪಶ್ಚಿಮಘಟ್ಟ ಪ್ರದೇಶಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜೀವಜಲ ಉಳಿಯಬೇಕಾದರೆ ಅರಣ್ಯ ಪ್ರದೇಶದ ರಕ್ಷಣೆಯಾಗಬೇಕು. ನೀರಿನ ಲಭ್ಯತೆ ಇಲ್ಲದೆ ಯಾವುದೇ ಅಭಿವೃದ್ಧಿ ಅಸಾಧ್ಯ ಎಂದು ಅಭಿಪ್ರಾಯಪಟ್ಟರು. ದೇವರು ಕೊಟ್ಟ ಕೊಡುಗೆ ಪಶ್ಚಿಮಘಟ್ಟ ಪ್ರದೇಶವನ್ನು ಉಳಿಸುವುದು ಕೂಡ ಅಭಿವೃದ್ಧಿಯ ಒಂದು ಭಾಗವಾಗಿದೆ. ಅರಣ್ಯ ಛಿದ್ರೀಕರಣವನ್ನು ತಡೆಯುವ ಮೂಲಕ ಈ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಬ್ದಾರಿ ನಮ್ಮ ಮೇಲಿದೆ. ನಿಸರ್ಗ ಆರೋಗ್ಯವನ್ನು ಕೊಡುತ್ತದೆ, ನದಿಗಳಿಲ್ಲದೆ ಆರ್ಥಿಕ ಪ್ರಗತಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಪ್ರವೀಣ್ ಭಾರ್ಗವ್ ವೈಜ್ಞಾನಿಕ ಪರಿಹಾರದ ಮೂಲಕ ಪರಿಸರ ಮತ್ತು ಅಭಿವೃದ್ಧಿಯ ಸಂಗಮ ಸಾಧ್ಯವಾಗಲಿದೆ ಎಂದರು.

ಅರಣ್ಯವನ್ನು ನಾಶಮಾಡದೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ವೈಜ್ಞಾನಿಕ ಮಾರ್ಗಗಳಿವೆ. ಹೆದ್ದಾರಿಯನ್ನು ಅರಣ್ಯ ಪ್ರದೇಶಕ್ಕಿಂತ ಮೇಲ್ಭಾಗದಲ್ಲಿ ಕೊಂಡೊಯ್ಯುವ ಅಥವಾ ಸುರಂಗ ಮಾರ್ಗಗಳನ್ನು ಬಳಸುವ ಅವಕಾಶಗಳಿವೆ. ವನ್ಯ ಜೀವಿಯ ಚಲನವಲನಕ್ಕೆ ಅಡ್ಡಿಯಾಗದ ರೀತಿಯಲ್ಲಿ ಸೇತುವೆಗಳ ವಿನ್ಯಾಸ ಸಾಧ್ಯವಿದೆ. ಈ ರೀತಿಯ ವೈಜ್ಞಾನಿಕ ಪರಿಹಾರಕ್ಕಾಗಿ ಸುಮಾರು 55 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ವೈಜ್ಞಾನಿಕ ಪರಿಹಾರದಡಿ ವೇದಿಕೆಯನ್ನು ಸಜ್ಜುಗೊಳಿಸಿ ಅಭಿವೃದ್ಧಿ ಪರ ಮತ್ತು ಪರಿಸರವಾದಿ ಬಣಗಳ ನಡುವೆ ಚರ್ಚೆ ನಡೆಯುವ ಅಗತ್ಯವಿದೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಅಭಿವೃದ್ಧಿಗಾಗಿ ಪರಿಸರವನ್ನು ಮತ್ತು ಪರಿಸರಕ್ಕಾಗಿ ಅಭಿವೃದ್ಧಿಯನ್ನು ಕೈ ಬಿಡಬೇಕಾಗುತ್ತದೆ. ಆದರೆ ವನ್ಯ ಜೀವಿಗಳ ಜೀವಕ್ಕೆ ಕುತ್ತು ತರುವ ರೀತಿ ಅರಣ್ಯ ಛಿದ್ರೀಕರಣವಾಗಬಾರದು ಎಂದು ಪ್ರವೀಣ್ ಭಾರ್ಗವ್ ತಿಳಿಸಿದರು.

ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಸ್ತವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: