ಮೈಸೂರು

ಸರ್ಕಾರದ ಧೋರಣೆ ಖಂಡನೀಯ : ನಾಗೇಂದ್ರ

ಬರ ಪರಿಸ್ಥಿತಿ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಹಾಗೂ ಮಹಾಮೈತ್ರಿಯ ಹಕ್ಕೊತ್ತಾಯಕ್ಕೆ ಅಧಿವೇಶನದಲ್ಲಿ ಸರ್ಕಾರದ ತಿರಸ್ಕಾರ ಜೊತೆಗೆ ಸತತ ಬರಕ್ಕೆ ಗುರಿಯಾಗಿರುವ ಗ್ರಾಮೀಣ ಭಾಗದ ಕುರಿತ ಸರ್ಕಾರದ ಧೋರಣೆಯನ್ನು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಠವಲಪುರ ನಾಗೇಂದ್ರ ಖಂಡಿಸಿದ್ದಾರೆ.

ಮೈಸೂರಿನ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ, ಕರ್ನಾಟಕ ಗ್ರಾಮೀಣ ಭಾಗದ ಪುನಶ್ಚೇತನದ ದೃಷ್ಠಿಯಿಂದ ಮಹತ್ತರವಾದ ತೀರ್ಮಾನಗಳನ್ನು ತೆಗೆದುಕೊಳ್ಳದೇ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಸಭಾತ್ಯಾಗ ಮಾಡಿ, ಬರದ ಚರ್ಚೆಯನ್ನು ಸಮಾಪ್ತಿ ಮಾಡಿದ್ದು ತುಂಬಾ ಅಮಾನವೀಯ ಎಂದರು.

ಮೂರು ರಾಜಕೀಯ ಪಕ್ಷಗಳು ಇದರಲ್ಲಿ ಶಾಮೀಲಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲಕ್ಕೆ ಇನ್ನೂ ಅವಕಾಶವಿದೆ. ಅಂದು ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರ ಖಾಸಗಿ ನಿರ್ಣಯ ಚರ್ಚೆಗೆ ಬರಲಿದೆ. 3 ಪಕ್ಷಗಳು ಪ್ರತ್ಯೇಕವಾಗಿ ಮುಂದಿಟ್ಟಿರುವ ಅಂಶಗಳಿಗಾದರೂ ಅವರು ಬದ್ಧರಾಗಿರುವುದಾದಲ್ಲಿ, ಅವರು ಈ ನಿರ್ಣಯವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಮಹಾಮೈತ್ರಿಯ ಹಕ್ಕೊತ್ತಾಯವೇ ಪುಟ್ಟಣ್ಣನವರ ನಿರ್ಣಯವಾಗಿದ್ದಲ್ಲಿ ಅದನ್ನು ಬೆಂಬಲಿಸಲು 3 ರಾಜಕೀಯ ಪಕ್ಷಗಳಿಗೂ ತಕರಾರಿಲ್ಲ ಎಂದಾಗುತ್ತದೆ. ಅವರು ಗುರುವಾರ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಮು ಚನ್ನಪಟ್ಟಣ, ನಾಗರಾಜು, ವಾಸು , ರವಿಕಿರಣ್ ಉಪಸ್ಥಿತರಿದ್ದರು.

Leave a Reply

comments

Related Articles

error: