ಕರ್ನಾಟಕ

ಅಡುಗೆ ಸಿಬ್ಬಂದಿಗಳಿಗೆ ಕಳಪೆ ಗುಣಮಟ್ಟದ ಧಿರಿಸು ವಿತರಣೆ: ಎಚ್.ಎನ್.ಮಂಜುನಾಥ್ ಆರೋಪ

ಸೋಮವಾರಪೇಟೆ,ಮಾ.13-ತಾಲ್ಲೂಕಿನ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಅಡುಗೆ ಸಿಬ್ಬಂದಿಗಳಿಗೆ ವಿತರಿಸಲಾಗಿರುವ ಆಗ್ನಿ ಸುರಕ್ಷತಾ ಧಿರಿಸು (ಏಫ್ರಾನ್) ಕಳಪೆ ಗುಣಮಟ್ಟದಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಆರೋಪಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದಂತೆ ಪರ್‍ಫೆಕ್ಟ್ ಸೇಫ್ಟಿ ಎಂಬ ಸಂಸ್ಥೆಯಿಂದ ಕಳಪೆ ಗುಣಮಟ್ಟದ ಧಿರಿಸನ್ನು ನೀಡಲಾಗಿದ್ದು, ಇದರ ಬೆಲೆ ಆನ್‍ಲೈನ್ ಪರಿಶೀಲಿಸಿದಾಗ 250 ರೂ.ಗಳಾಗಿರುತ್ತದೆ. ಆದರೆ ಪ್ರತಿ ಶಾಲೆಯಿಂದ 2,100 ರೂ. ಹಣಕ್ಕೆ ಚೆಕ್ ಪಡೆದಿರುತ್ತಾರೆ. ಕೂಡಲೇ ಮೇಲಾಧಿಕಾರಿಗಳು ಗುಣಮಟ್ಟ ಪರೀಕ್ಷೆ ನಡೆಸಿ, ಪರ್‍ಫೆಕ್ಟ್ ಸೇಫ್ಟಿ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೇವಲ ನಾಲ್ಕೈದು ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆಯಿಂದಲೂ ಹಣವನ್ನು ಪಡೆಯಲಾಗಿದೆ. ಕೆಲವು ಎಸ್‍ಡಿಎಂಸಿಗಳಲ್ಲಿ ಅಡುಗೆ ಸಿಬ್ಬಂದಿಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಆದರೂ 2100 ರೂ.ಗಳನ್ನು ನೀಡಿ ಏಫ್ರಾನ್ ಖರೀದಿಸಿದ್ದಾರೆ. ತಕ್ಷಣವೇ ಸಂಬಂಧಿಸಿದ ಸಂಸ್ಥೆಯವರು ಗುಣಮಟ್ಟ ಪರೀಕ್ಷೆ ನಡೆಸಿದ 2,100 ರೂ. ಮೌಲ್ಯದ ಉತ್ತಮ ಗುಣಮಟ್ಟದ ಧಿರಿಸನ್ನು ವಿತರಿಸಲಿ. ತಪ್ಪಿದಲ್ಲಿ ಪಡೆದಿರುವ ಹಣದ ಚೆಕ್ ಹಿಂತಿರುಗಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಕರ ಸಂಘದ ವಲಯಾಧ್ಯಕ್ಷ ಸಿ.ಕೆ. ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಯೋಗೇಶ್, ಸಹ ಕಾರ್ಯದರ್ಶಿ ಎಚ್.ಎಸ್. ರಾಜಪ್ಪ, ನಿರ್ದೇಶಕ ಆನಂದ ಇದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: